ಬೀದರ್

ಆರೋಗ್ಯ ಸಂಜೀವಿನಿ: ನೋಂದಣಿಗೆ ಗಂದಗೆ ಮನವಿ

ಬೀದರ್: ರಾಜ್ಯ ಸರ್ಕಾರ ಸೆ. 15 ರಿಂದ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಜಾರಿಗೆ ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು ಕೂಡಲೇ ತಮ್ಮ ಹಾಗೂ ತಮ್ಮ ಅವಲಂಬಿತ ಕುಟುಂಬದ ಸದಸ್ಯರ ಮಾಹಿತಿಯನ್ನು ಎಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ನೋಂದಾಯಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮನವಿ ಮಾಡಿದ್ದಾರೆ.
ಕೇಂದ್ರ ಸಂಘದಿಂದ ಈ ಹಿಂದೆಯೇ ಮಾಹಿತಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಲಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ಆಗದಿರುವುದು ಯೋಜನೆ ಅನುಷ್ಠಾನಕ್ಕೆ ತೊಡಕಾಗಿದೆ ಎಂದು ಹೇಳಿದ್ದಾರೆ.
ಇದೀಗ ಮತ್ತೊಮ್ಮೆ ಎಚ್.ಆರ್.ಎಂ.ಎಸ್. ತಂತ್ರಾಂಶ https://hrms.karnataka.gov.in ಹಾಗೂ ಮೊಬೈಲ್ ಅಪ್ಲಿಕೇಷನ್ https://hrmsenroll.karnataka.gov.inನಲ್ಲಿ  ಮಾಹಿತಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲ ಸರ್ಕಾರಿ ಅಧಿಕಾರಿ/ನೌಕರರು ತಾವು ಕರ್ತವ್ಯ ನಿರ್ವಹಿಸುವ ಇಲಾಖೆಗಳ ಡಿ.ಡಿ.ಒ.ಗಳನ್ನು ಸಂಪರ್ಕಿಸಿ, ಮಾಹಿತಿ ನೊಂದಾಯಿಸಿಕೊಳ್ಳಬೇಕು ಎಂದು ಕೋರಿದ್ದಾರೆ.
ಸಂಘದ ನಿರಂತರ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ನಗದು ರಹಿತ ವೈದ್ಯಕೀಯ ಸೇವೆಯ ಯೋಜನೆ ಜಾರಿಗೆ ಮುಂದಾಗಿದೆ. ನೌಕರರು ಹಾಗೂ ಅವರ ಅವಲಂಬಿತರು ಸೇರಿ ಬೀದರ್ ಜಿಲ್ಲೆಯಲ್ಲಿ 1 ಲಕ್ಷ ಜನರಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.
ಬೀದರ್ ಗಡಿ ಜಿಲ್ಲೆ ಆಗಿರುವ ಕಾರಣ ಜಿಲ್ಲೆಯ ನೌಕರರು ಹಾಗೂ ಅವರ ಅವಲಂಬಿತರು ಜಿಲ್ಲೆಯ ಜತೆಗೆ ನೆರೆಯ ತೆಲಂಗಾಣದ ಹೈದರಾಬಾದ್ ಹಾಗೂ ಮಹಾರಾಷ್ಟ್ರದ ಸೋಲಾಪುರದ ನೋಂದಾಯಿತ ಆಸ್ಪತ್ರೆಗಳಲ್ಲೂ ಆರೋಗ್ಯ ಸಂಜೀವಿನಿ ಯೋಜನೆಯಡಿ ನಗದು ರಹಿತ ವೈದ್ಯಕೀಯ ಸೇವೆ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.

Ghantepatrike kannada daily news Paper

Leave a Reply

error: Content is protected !!