ಬೀದರ್

ಅಪ್ಪನ ಕನಸ್ಸು ಈಡೇರಿಸದೆ ಕಥೆಗಾರನಾದೆ : ಗುರುನಾಥ ಅಕ್ಕಣ್ಣ

ನಾ ಓದಿದ್ದು ಡಿಪ್ಲೋಮಾ, ನೌಕರಿ ಮಾಡಿದ್ದು ಅಂಚೆ ಇಲಾಖೆ, ಪ್ರವರ್ತಿ ಮಾತ್ರ ಸಾಹಿತ್ಯ. ಒಂದಕ್ಕೊಂದು ಸಂಬಂಧ ಇರದೆ ಇದ್ದರು ನನ್ನ ಬದುಕು ಒಂದು ಸಂತೃಪ್ತಿ. ಅಪ್ಪನ ಇಂಜಿನೀಯರ್ ಆಗುವ ಕನಸ್ಸು ಈಡೇರಿಸದೆ ಕಥೆಗಾರನಾದೆ ಎಂದು ಗುರುನಾಥ ಅಕ್ಕಣ್ಣ ಅಮೃತ ಮಹೋತ್ಸವದಲ್ಲಿ ಮನದಾಳದ ಮಾತು ಹಂಚಿಕೊಂಡರು.

ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಮನೆ ಅಂಗಳದಲ್ಲಿ ಮಾತು ಅಮೃತ ಮಹೋತ್ಸವ ಸಮಾರಂಭವನ್ನು ಶಿವನಗರ (ಉ) ಸಾಹೇಬ್ ಲೇಔಟ್ ಬಸವೇಶ್ವರ ನಗರ ಸಿದ್ಧ ಬಸವ ನಿಲಯದಲ್ಲಿ ಸಸಿಗೆ ನೀರೆರೆದು ಉದ್ಘಾಟಿಸಿದ ಕ.ರಾ.ಸಿ., ಪ.ಪೂ. ಕಾಲೇಜಿನ ಪ್ರಾಚಾರ್ಯರಾದ ಡಾ|| ಬಸವರಾಜ ಬಲ್ಲೂರ ಮಾತನಾಡುತ್ತ ಪರಿಷತ್ತಿನ ಕಾರ್ಯ ಪ್ರಶಂಸನೀಯ. ಪರಿಷತ್ತು ಮನೆ ಮನೆಗೆ ಆಗಮಿಸಿ ಸಾಹಿತಿ, ಕಲಾವಿದ, ಚಿಂತಕ ಹೋರಾಟಗಾರ, ಸಂಗೀತಗಾರ, ಪತ್ರಿಕರ್ತರ ವಿಚಾರಗಳನ್ನು ಅರ್ಥೈಸಿಕೊಳ್ಳುವ ಇದೊಂದು ವಿನೂತನವಾದ ಕಾರ್ಯಕ್ರಮ.

ಇಂದಿನ ಸಾಹಿತ್ಯಾಸಕ್ತರಲ್ಲಿ ಪಕ್ವತೆ ಕೊರತೆ ಇದೆ. ವ್ಯವಧಾನ ಅವಧಾನ ಇಲ್ಲ. ಸಾಹಿತಿಯಾದವರಲ್ಲಿ ಸೌಹಾರ್ದತೆ ನೆಲೆಗೊಳ್ಳಬೇಕು. ಜವಾಬ್ದಾರಿ ಅರಿತು ಗಟ್ಟಿ ಸಾಹಿತ್ಯ ರಚಿಸಬೇಕೆಂದು ಸಲಹೆ ನೀಡಿದರು.

ಗುರುನಾಥ ಅಕ್ಕಣ್ಣನವರಲ್ಲಿ ರೋಚಕ ಅನುಭವವಿದೆ. ಮುಲಾಜಿಗೆ ಒಳಗಾಗದೆ ಗಂಭೀರ ವ್ಯಕ್ತಿತ್ವ, ಸಂವೇದನ ಶೀಲ, ವಿಚಾರ, ಬದ್ಧತೆಯುಳ್ಳವರು. ಪ್ರಶಸ್ತಿ ಪುರಸ್ಕಾರ, ಮಾನ ಸನ್ಮಾನ ಅವಕಾಶ ಮನೆ ಬಾಗಿಲಿಗೆ ಬಂದಾಗ ಅಷ್ಟೆ ವಿನಯ ಪೂರಕವಾಗಿ ನಿರಾಕರಣೆ ಮಾಡಿರುವುದು ನಾನು ಬಲ್ಲವನಾಗಿರುವೆನೆಂದು ನುಡಿದರು.

ಸಾಹಿತಿಗಳಾದ ಪಾರ್ವತಿ ಸೋನಾರೆ ಮಾತನಾಡಿ ಅಕ್ಕಣ್ಣನವರಲ್ಲಿ ಗ್ರಾಮೀಣ ಸೊಗಡಿದೆ. ಶಬ್ಧ ಸಂಗ್ರಹ ಅನುಭವ, ಅಮೃತ ಅಡಗಿದೆ. ಯಾರನ್ನು ಪ್ರೀತಿಸಬೇಡ ಎಂಬ ಕಥೆ ಬರೆದದ್ದು ಯಾಕೆ ? ಕಲ್ಲಣ್ಣನ ಕಾಂಪ್ಲೇಂಟ್ ಓದುಗರ ಮನ ಮಿಡಿಯುತ್ತದೆ. ಹುಂಡಾ ಬಿಟ್ಟು, ಮದುವೆಯಾಗಿದ್ದರು ಯಾಕೆ ? ಎಂಬ ವಿಚಾರ ಅರಿತುಕೊಳ್ಳಬೇಕಾಗಿದೆ ಎಂದು ಪ್ರಶ್ನಿಸಿದರು.

ಕಸಾಪ ಕಾರ್ಯದರ್ಶಿ ಪ್ರೊ. ಶಿವಕುಮಾರ ಕಟ್ಟೆ ಮಾತನಾಡಿ – ಮೂರು ಗ್ರಂಥಗಳು ಹೊರಬಂದಿದ್ದು ಆದರೆ ಅನೇಕ ವಿವಾದಗಳಿಗೆ ಸೃಷ್ಟಿಯಾಗಿರುವುದು ಕಾರಣವೇನು. ನಿಮಗೆ ಸಾಹಿತ್ಯ ಕ್ಷೇತ್ರಕ್ಕೆ ಬರಲು ಪ್ರೇರಣೆಯಾರು ? ಇಂದು ತಾವೇನಾದರೂ ಪಾಠ ಕಲಿತಿರುವಿರೆ ಎಂದು ಪ್ರಶ್ನೆ ಹಾಕಿದರು.

ಕಥೆಗಾರ ಗುರುನಾಥ ಅಕ್ಕಣ್ಣ ಮಾತನಾಡಿ – ನನ್ನ ವಿವೇಚನಕ್ಕೆ ತಕ್ಕಂತೆ ಆತ್ಮ ಪ್ರಜ್ಞೆಯಿಂದ ಸಾಹಿತ್ಯ ರಚಿಸಿದ್ದೇನೆ. ಮೂರು ಗ್ರಂಥಗಳು ಪ್ರಕಟಗೊಂಡಾಗ ಅತಿಥಿಗಳಾದವರು ವಿವಾದ ಮಾಡಿರುವುದಕ್ಕೆ ನಾನು ಹೊಣೆಗಾರನಲ್ಲ. ಬಾಲ್ಯದಿಂದಲೆ ಸಾಹಿತ್ಯದ ಅಭಿರುಚಿಯುಳ್ಳ ನಾನು ಪ್ರಬಂಧ ಭಾಷಣಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದೆ. ನನ್ನ ಸಿದ್ದವ್ವ ಅಜ್ಜಿ ಕಥೆಗಳಿಗೆ ಪ್ರೇರಣೆ. ಮೊದಲಿನಿಂದಲು ಸಾಹಿತ್ಯ ವಿಧ್ಯಾರ್ಥಿಯಾಗಿ ಮಿತ್ರ ದ್ರೋಹ ನಾಟಕ ಬರೆದೆ. ಡಿಪ್ಲೋಮಾ ಕಲಿಯುವಾಗ ವರದಕ್ಷಿಣೆ ವಿನಾಶಕ್ಕೆ ಮೂಲ. ಲೇಖನ ಬರೆದಾಗ ಗೋಪಾಲರಾವ ಬಡಶೇಷಿ ಹುರಿದುಂಬಿಸಿರುವುದು ಸಂತಸ ಮೂಡಿಸಿತ್ತು. ಬಿಸಿಲೂ ಬೆಳದಿಂಗಳು ಕಥೆ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಗೊಂಡಾಗ ನನ್ನ ಸಂತೋಷಕ್ಕೆ ಪಾರವೆ ಇರಲಿಲ್ಲ.

ಬರಗೂರ ರಾಮಚಂದ್ರಪ್ಪ, ಗೀತಾ ನಾಗಭೂಷಣ, ಗಿರಡ್ಡಿ ಗೋವಿಂದರಾಜ, ವೀರೇಂದ್ರ ಸಿಂಪಿ, ಮಲ್ಲಿನಾಥ ಗದ್ವಾಲ ಚಿಕ್ಕಪೇಟೆ ಮುಂತಾದವರು ನನ್ನ ಸಾಹಿತ್ಯಕ್ಕೆ ಪ್ರೇರಣೆ ನೀಡಿದವರು. ಕಲ್ಲಣ್ಣನ ಕಾಂಪ್ಲೇಂಟ 7 ಸಲ ಮರು ಮುದ್ರಣಗೊಂಡಿದೆ. ಇಲ್ಲಿಯವರೆಗೆ ನೂರಾರು ಕಥೆಗಳನ್ನು ಬರೆದಿದ್ದೇನೆ. ಆದರೆ 50 ಕಥೆಗಳು ವಿವಿಧ ಪತ್ರಿಕೆ, ಸಂಚಿಕೆ ಪುಸ್ತಕ ರೂಪದಲ್ಲಿ ಹೊರಬಂದಿವೆ. “ಮಾಯೆ ನಿನ್ನೊಳಗೆ” ಎಂಬ ನನ್ನ ಕಥೆ ಸಿನಿಮಾ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಎಂ.ಎ. ಅಂತಿಮ ವರ್ಷದ ಪಠ್ಯಕ್ಕೆ ನನ್ನ ಕಥೆ ಆಯ್ಕೆಯಾಗಿದೆ.

ಮುಂಬೈ ಕಲಬುರಗಿ ವಿಶ್ವವಿದ್ಯಾಲಯ, ಪ್ರಜಾವಾಣಿ, ಕರ್ಮವೀರ, ಸಂಯುಕ್ತ ಕರ್ನಾಟಕ ದಿಂದ ನನ್ನ ಸಾಹಿತ್ಯಕ್ಕೆ ಅಪಾರವಾದ ಗೌರವ ಲಭಿಸಿದೆ. ನಾನು ಯಾವುದೇ ತರಹದ ಲಾಬಿ ಮಾಡಿಲ್ಲ. ಆದರೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನನಗೆ ಗೌರವ ನೀಡಿರುವುದುರು ಮರೆಯಲಾಗದ ಸಂಗತಿ. ಅಂದಿನ ಸಾಹಿತ್ಯ ಇಂದಿನ ಸ್ಥಿತಿ ಬೇರೆಯಾಗಿದೆ. ತಲ್ಲಣಗಳು ಅರಿಯಬೇಕಾಗಿದೆ. ಆಳಕ್ಕೆ ಹೋಗಬೇಕಾಗಿದೆ. ಅನೇಕ ಕನಸುಗಳು ಹೊತ್ತು ಬೀದರಿಗೆ ಬಂದಿದ್ದೇನೆ. ಅನೇಕರ ಸಹಕಾರದಿಂದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಅಧ್ಯಕ್ಷರಾಗಿ ಬರಹಗಾರರ ಕಲಾವಿಧರ ಬಳಗದ ಅಧ್ಯಕ್ಷರಾಗಿ ಬಸವದಳದ ಗ್ರಂಥಾಲಯದ ಸಂಚಾಲಕರಾಗಿ ಸೇವೆ ಮಾಡಿರುವುದು ಸಂತೃಪ್ತಿ ನನ್ನಲ್ಲಿ ಅಡಗಿದೆ. ನಾನು ಬದ್ಧತೆಯಿಂದ ಅಂಚೆ ಇಲಾಖೆ ಸೇವೆ, ಸಂಸಾರದ ಬಾಳು ಸುಗಮ, ಸಾಹಿತ್ಯ ತಕ್ಕ ಮಟ್ಟಿಗೆ ರಚನೆ ಮಾಡಿ ಎಲ್ಲರ ಪ್ರೀತಿಗೆ ಪಾತ್ರನಾಗಿರುವೇನು. ಇನ್ನೂ ಅನೇಕರ ಒಡನಾಟ ಅನುಭವದಿಂದ ಸಾಹಿತ್ಯದ ಆಳಕ್ಕೆ ಇಳಿದು ಪ್ರಚಲಿತ ವಿದ್ಯಮಾನದ ಸಾಹಿತ್ಯ ಬರೆಯುವ ಆಲೋಚನೆ ನನ್ನದಾಗಿದೆ. ನಮ್ಮ ಸಾಹಿತಿಗಳು ಕಲ್ಯಾಣ ಕರ್ನಾಟಕದ ಆಚೆ ಹೋಗಬೇಕು. ಜಿಲ್ಲೆಯ ಸೊಗಡಿನಲ್ಲಿ ಅಪೂರ್ವ ಸಾಹಿತ್ಯ ಅಡಗಿದೆ. ಅದನ್ನು ಹಂಚಿಕೊಳ್ಳುವ ಪ್ರವೃತ್ತಿ ಎಲ್ಲರಲ್ಲಿ ಮೈಗೂಡಿಸಿಕೊಳ್ಳಬೇಕೆಂದು ತಮ್ಮ ಅನುಭವ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ – ಗುರುನಾಥ ಅಕ್ಕಣ್ಣ ಒಬ್ಬ ನಿಷ್ಠೂರ ಹಾಗೂ ನಿಸ್ವಾರ್ಥ ಕಥೆಗಾರರು. ಇವರ ಅನುಭವ ಇಂದಿನ ಜನಮಾನಸಕ್ಕೆ ಅತಿ ಅವಶ್ಯಕವಾಗಿದೆ. ಮುಂದಿನ ದಿನಮಾನಗಳಲ್ಲಿ ಅವರ ಸೇವೆ ನಮ್ಮ ಪರಿಷತ್ತಿಗೆ ಬೇಕಾಗಿದೆ. ಇಂದು ಅವರು ನಿವೃತ್ತಿಯಾಗಿದ್ದು ಅವರ ಬದುಕು ನಮಗೆಲ್ಲರಿಗೆ ಮಾದರಿಯೆಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಅಧ್ಯಕ್ಷರಾದ ಎಮ್.ಎಸ್. ಮನೋಹರ ಅಧ್ಯಕ್ಷತೆ ವಹಿಸಿದರು.

ಸಮಾರಂಭದಲ್ಲಿ ಡಾ. ಸಂಜೀವಕುಮಾರ ಅತಿವಾಳೆ, ಪ್ರೊ. ಜಗನ್ನಾಥ ಕಮಲಾಪೂರೆ, ಡಾ. ರಘುಶಂಖ ಭಾತಂಬ್ರಾ, ಬಸವರಾಜ ಮೈಲೂರ, ವಿಜಯಕುಮಾರ ಸೋನಾರೆ, ರುಕ್ಮೊದ್ದಿನ್ ಇಸ್ಲಾಂಪೂರ, ನಾಗಶೆಟ್ಟಿ ಜೋತ್ಯೆಪ್ಪನವರ, ಪ್ರಭು ಗಂಗು, ಶಿವಪುತ್ರಪ್ಪ ಪಾಟೀಲ, ನಾಗಶೆಟ್ಟಿ ಧರ್ಮಪೂರ, ಸುರೇಶ ಅಕ್ಕಣ್ಣ, ದೇವಿಂದ್ರ ಕರಂಜಿ, ಬಿ. ಎನ್. ಸ್ವಾಮಿ, ಸಿದ್ಧಾರೂಢ ಭಾಲ್ಕೆ, ರಾಜಕುಮಾರ ಲದ್ದೆ ಸೇರಿದಂತೆ 25 ಜನರನ್ನು ತಮ್ಮ ಮನೆಯ ಪರವಾಗಿ ಗೌರವಿಸಿದ್ದರು. ಗುರುನಾಥ ಅಕ್ಕಣ್ಣನವರ ತಂದೆಯವರಾದ ಆದರ್ಶ ಶಿಕ್ಷಕರಾದ ಕಾಶಪ್ಪಾ ಅಕ್ಕಣ್ಣ 90 ವರ್ಷದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.

ಟಿ.ಎಮ್. ಮಚ್ಚೆ ಕಾರ್ಯದರ್ಶಿಗಳು ನಿರೂಪಿಸಿದರೆ, ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ ಸ್ವಾಗತಿಸಿದರೆ, ಪ್ರೊ. ಜಗನ್ನಾಥ ಕಮಲಾಪೂರೆ ವಂದಿಸಿದರು. ಕಾರ್ಯಕ್ರಮದಲ್ಲಿ ಹಾವಗಿ ಸ್ವಾಮಿ ಕನ್ನಡ ಗೀತೆಗಳನ್ನು ಹಾಡಿದರು. ಕೊನೆಯಲ್ಲಿ ಅಕ್ಕಣ್ಣ ದಂಪತಿಗಳಿಗೆ ಪರಿಷತ್ ಪರವಾಗಿ ಸನ್ಮಾನಿಸಿದರು.

Ghantepatrike kannada daily news Paper

Leave a Reply

error: Content is protected !!