ಅಪ್ನಾ ಘರ್: 20 ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ
ಬೀದರ್: ಇಲ್ಲಿಯ ನಂದಿ ಕಾಲೊನಿಯಲ್ಲಿ ಇರುವ ಶ್ರೀ ಸಿದ್ದೇಶ್ವರ ಟ್ರಸ್ಟ್ ಸಂಚಾಲಿತ ಅಪ್ನಾ ಘರ್ ಪ್ರಸಾದ ನಿಲಯವು ಪ್ರಸಕ್ತ ಸಾಲಿನಲ್ಲಿ 20 ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸುವುದಾಗಿ ಪ್ರಕಟಿಸಿದೆ.
ಅನಾಥ, ನಿರ್ಗತಿಕ ಹಾಗೂ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಹಸ್ತ ಚಾಚಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ರೀ ಸಿದ್ದೇಶ್ವರ ಟ್ರಸ್ಟ್ ಅಧ್ಯಕ್ಷ ಶಶಿಕಾಂತ ಮೋದಿ ತಿಳಿಸಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಊಟ, ವಸತಿ ಸಹಿತ ಉಚಿತ ಶಿಕ್ಷಣ ಕೊಡಿಸಲಾಗುವುದು. ಶಿಕ್ಷಣ ಪೂರ್ಣಗೊಳಿಸಿದವರಿಗೆ ಉದ್ಯೋಗ ಕಲ್ಪಿಸಿಕೊಡಲು ಸಹ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.
2012 ರಿಂದಲೂ ಅಪ್ನಾ ಘರ್ ಪ್ರಸಾದ ನಿಲಯ ನಡೆಸಿಕೊಂಡು ಬರಲಾಗುತ್ತಿದೆ. ಕೋವಿಡ್ ಕಾರಣದಿಂದಾಗಿ ಎರಡು ವರ್ಷ ಪ್ರವೇಶ ಸ್ಥಗಿತಗೊಳಿಸಲಾಗಿತ್ತು.
ಬಡತನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕೆ ತಮ್ಮ ಮೆಡಿಕಲ್ನಿಂದ ಬರುವ ಆದಾಯದಲ್ಲಿ ಶೇ 10 ರಷ್ಟನ್ನು ಪ್ರಸಾದ ನಿಲಯಕ್ಕೆ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.
ಅಪ್ನಾ ಘರ್ನಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ವಿವಿಧ ಹುದ್ದೆಗಳಲ್ಲಿ ಇದ್ದಾರೆ. ಸ್ವ ಉದ್ಯೋಗ ಆರಂಭಿಸಿದ್ದಾರೆ. ನಿಲಯದ ಪ್ರವೇಶಕ್ಕಾಗಿ ಮೊಬೈಲ್ ಸಂಖ್ಯೆ 9448400365ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.