ಅನ್ಯಭಾಷಿಗರಿಗೆ ಕನ್ನಡ ಕಲಿಸಿದರೆ ಕನ್ನಡಾಂಬೆಯ ಗೌರವ ವೃದ್ಧಿ – ಶೆಟಕಾರ
ಬೀದರ: ನಮ್ಮ ರಾಜ್ಯದಲ್ಲಿ ವಾಸಿಸುವ ಜನರಿಗಿಂತ ಹೊರರಾಜ್ಯಗಳಿಂದ ಬಂದ ಅತಿಥಿಗಳಿಗೆ ಕನ್ನಡ ಕಲಿಸಿದರೆ ಕನ್ನಡಮಾತೆಯ ಗೌರವ ವೃದ್ಧಿಸುವುದಲ್ಲದೆ ನಮ್ಮ ಹೃದಯದಲ್ಲೂ ಧನ್ಯತಾಭಾವ ಮೂಡುತ್ತದೆ ಎಂದು ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಶಿವಕುಮಾರ ಶೆಟಕಾರ ನುಡಿದರು.
ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬ್ರಿಮ್ಸ್ ಕನ್ನಡ ಸಂಘದ ಸಹಯೋಗದಲ್ಲಿ 2021-22ನೇ ಸಾಲಿನ ವೈದ್ಯಕೀಯ ‘ಆಶ್ರಯಾಸ್’ ವಿದ್ಯಾರ್ಥಿಗಳ ತಂಡಕ್ಕೆ ಕನ್ನಡ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ನುಡಿಮೇಳಕ್ಕೆ ಕನ್ನಡಾಂಬೆಯ ಭಾವಚಿತ್ರ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜುಲೈ 26 ರಿಂದ ಆಗಸ್ಟ್ 6ರ ವರೆಗೆ ಬ್ರಿಮ್ಸ್ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ನೆಲ ಜಲ ಮತ್ತು ಸಂಸ್ಕøತಿ ಕುರಿತು ಜಾಗೃತಿ ಮೂಡಿಸಲು ಜನಪದ ಆಟಗಳಾದ ರಂಗೋಲಿ, ಬುಗುರಿ, ಹಗ್ಗಜಗ್ಗಾಟ ಆಟ ಆಡಿಸಲಾಗುತ್ತಿದೆ. ಅಲ್ಲದೇ ವೇಷಭೂಷಣ ಸ್ಪರ್ಧೆ, ಜನಪದ ಹಾಡುಗಳ ಸ್ಪರ್ಧೆ, ಕನ್ನಡ ಭಾಷಣ ಸ್ಪರ್ಧೆಗಳು, ಕನ್ನಡ ಚಲನಚಿತ್ರಗೀತೆಗಳ ಮೇಲೆ ನೃತ್ಯ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಕನ್ನಡ ಚಿತ್ರನಟ ನಟಿಯರ ಮಿಮಿಕ್ರಿ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ನಾವು ಅನ್ಯಭಾಷೆಗಳನ್ನು ಬಹಳ ಬೇಗ ಕಲಿಯುತ್ತೇವೆ. ಆದರೆ ನಮ್ಮ ರಾಜ್ಯಕ್ಕೆ ಬಂದ ಅತಿಥಿಗಳಿಗೆ ಅಥವಾ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಸುವುದೇ ಇಲ್ಲ. ಹೀಗಾಗಿ ಹೊರ ರಾಜ್ಯಗಳಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಸುವ ಮತ್ತು ಅವರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಶೆಟಕಾರ ತಿಳಿಸಿದರು.
ಬ್ರಿಮ್ಸ್ ಕನ್ನಡ ಸಂಘದ ಸಂಯೋಜಕರಾದ ಡಾ. ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿ ಅತ್ಯಂತ ಸರಳವಾಗಿರುವ ಕನ್ನಡ ಭಾಷೆ ಸಾಗರದಾಚೆ ಪಸರಿಸಬೇಕಾಗಿದೆ. ವೈದ್ಯಕೀಯ ವಿಭಾಗದಲ್ಲಿ ಕನ್ನಡ ಕಣ್ಮರೆಯಾಗುತ್ತಿರುವ ಪ್ರಯುಕ್ತ 2008 ರಲ್ಲಿ ಬ್ರಿಮ್ಸ್ ಕನ್ನಡ ಸಂಘದ ಸ್ಥಾಪನೆ ಮಾಡಲಾಯಿತು. ಇಡೀ ರಾಜ್ಯದಲ್ಲಿ ಬ್ರಿಮ್ಸ್ ಕನ್ನಡ ಸಂಘದ ಹೊಂದಿದ ಏಕೈಕ ಜಿಲ್ಲೆ ಬೀದರ ಆಗಿದೆ. ಹೀಗಾಗಿ ಈ ಸಂಘದ ಮೂಲಕ ಬ್ರಿಮ್ಸ್ನಲ್ಲಿ ಪ್ರತೀ ವರ್ಷ ಕನ್ನಡ ರಾಜ್ಯೋತ್ಸವ, ನುಡಿಮೇಳ, ಕನ್ನಡ ಜಾಗೃತಿ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ತನ್ಮೂಲಕ ಅನ್ಯರಾಜ್ಯಗಳ ವಿದ್ಯಾರ್ಥಿಗಳಿಗೂ ಕನ್ನಡ ಕಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಕವಿವಾಣಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಸಂಘದ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ 2023-23ನೇ ಸಾಲಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳು ಸಂಭ್ರಮದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕನ್ನಡ ಗೀತೆಗಳ ಮೇಲೆ ನೃತ್ಯ ಪ್ರದರ್ಶನ ಮಾಡಿದರು. ಇದೇ ವೇಳೆ ಪ್ರಾಚಾರ್ಯರಾದ ಡಾ. ರಾಜೇಶ ಪಾರಾ, ಶಾರಿರಿಕ ವಿಭಾಗದ ಮುಖ್ಯಸ್ಥ ಡಾ. ಸುಭಾಷ ಚಿಮಕೊಡೆ, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ. ಪಲ್ಲವಿ ಕೇಸರಿ, ಜೀವರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಾವೇದ್ ಅಹ್ಮದ್, ಪ್ರಮುಖರಾದ ಡಾ. ಗಜಾನಂದ ಕುಲಕರ್ಣಿ, ಡಾ. ವೈಶಾಲಿ ಸೇರಿದಂತೆ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು. ಎಚ್.ರಾಮಾ ನಿರೂಪಿಸಿ ಸ್ವಾಗತಿಸಿದರು. ಸಂತೋಷ ಬುಳ್ಳಾ ವಂದಿಸಿದರು.