ಬೀದರ್

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ವ್ಯವಸ್ಥಿತವಾಗಿ ಆಯೋಜಿಸಬೇಕು-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ, ಆಗಸ್ಟ್. 31 :- ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸೆಪ್ಟೆಂಬರ್ 15 ರಂದು ರಾಜ್ಯದಲ್ಲಿ ಆಯೋಜನೆ ಮಾಡುತ್ತಿದ್ದು ಅದರಂತೆ ನಮ್ಮ ಜಿಲ್ಲೆಯಲ್ಲಿಯೂ ಅಧಿಕಾರಿಗಳು ವ್ಯವಸ್ಥಿತವಾಗಿ ಆಯೋಜನೆ ಮಾಡಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕರೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಬೀದರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಿಸಲಾಗುತ್ತಿದ್ದು ಈ ಕಾರ್ಯಕ್ರಮ ಬಸವಕಲ್ಯಾಣದಿಂದ ಆರಂಭವಾಗಲಿದೆ. ನಮ್ಮ ಜಿಲ್ಲೆಯಿಂದ ಕಲಬುರಗಿ ಜಿಲ್ಲೆಯ ಗಡಿಯವರೆಗೆ ಹೋಗಲು 45 ಕಿ. ಮೀಟರ್ ಆಗುತ್ತಿದ್ದು ಅಂದಾಜು 35 ರಿಂದ 40 ಸಾವಿರ ಜನರನ್ನು ಸೇರಿಸಬೇಕು ಎಂದು ಹೇಳಿದರು.
ಪದವಿಪೂರ್ವ ಮತ್ತು ಶಾಲಾ ಶಿಕ್ಷಣ ಇಲಾಖೆಯಿಂದ ಹೆಚ್ಚಿನ ಮಕ್ಕಳನ್ನು ಕರೆತರಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತರು. ಮಹಿಳಾ ಸ್ವ- ಸಹಾಯ ಸಂಘದ ಮಹಿಳೆಯರನ್ನು ಕರೆತರಬೇಕು. ಸ್ವಯಂಸೇವಾ ಸಂಘಟನೆಗಳು ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆ ನಡೆಸಬೇಕು. ಪೊಲೀಸ್ ಇಲಾಖೆ ವತಿಯಿಂದ ಬಂದೋಬಸ್ತ್ ಮಾಡಬೇಕು. ಆರೋಗ್ಯ ಇಲಾಖೆ ವತಿಯಿಂದ ಎರಡು ಅಂಬುಲೆನ್ಸಗಳ ವ್ಯವಸ್ಥೆ ಮಾಡಬೇಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಂದು ಡಾಕ್ಟರಗಳು ಇರುವಂತೆ ನೋಡಿಕೊಳ್ಳಬೇಕು. ಮಾನವ ಸರಪಳಿ ಹೊರಟಾಗ ಅದರ ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕೆಂದರು.
ಬಸವಕಲ್ಯಾಣ ಹಾಗೂ ಹುಮನಾಬಾದ ತಾಲ್ಲೂಕಿನ ತಹಶಿಲ್ದಾರರು ತಮ್ಮ ತಾಲ್ಲೂಕಿನಿಂದ 5 ಸಾವಿರ ಜನರನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಮಾನವ ಸರಪಳಿ ಹೊರಡುವ ಮಾರ್ಗ ಮಧ್ಯದಲ್ಲಿ ಆಯಾ ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವತಿಯಿಂದ ಕುಡಿಯುವ ನೀರು ಹಾಗೂ ಅಲ್ಪ ಉಪಹಾರದ ವ್ಯವಸ್ಥೆ ಮಾಡಬೇಕು. ಬಸವಕಲ್ಯಾಣ ಹಾಗೂ ಹುಮನಾಬಾದ ತಹಶಿಲ್ದಾರರು. ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು. ಪೊಲೀಸ್ ಇನ್ಸ್ಪೆಕ್ಟರ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಜನರನ್ನು ಸೇರಿಸುವ ಕೆಲಸ ಮಾಡಬೇಕೆಂದರು.
ಶಿಕ್ಷಕರು ಮಕ್ಕಳನ್ನು ವ್ಯವಸ್ಥಿತವಾಗಿ ಕರೆತಂದು ಮತ್ತೆ ಅವರನ್ನು ಕರೆದುಕೊಂಡು ಹೋಗಬೇಕು. ಆಯಾ ಶಾಲಾ- ಮಕ್ಕಳು ತಮ್ಮ ಶಾಲೆಯ ಬ್ಯಾನರಗಳನ್ನು ಹಿಡಿದುಕೊಂಡು ಬರಬೇಕು. ಮಕ್ಕಳಿಗೆ ಕರೆ ತರಲು ವಾಹನಗಳಿಲ್ಲದ ಶಾಲೆಗಳಿಗೆ ಸಾರಿಗೆ ಇಲಾಖೆ ವತಿಯಿಂದ ವಾಹನಗಳ ವ್ಯವಸ್ಥೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಅವರು ಮಾತನಾಡಿ, ಸೆಪ್ಟೆಂಬರ್ 15 ಭಾನುವಾರ ಇರುವುದರಿಂದ ಮಕ್ಕಳು ಬರಲಿಕ್ಕಿಲ್ಲ ಹಾಗಾಗಿ ಮುಂಚಿತವಾಗಿ ಅವರಿಗೆ ಮಾಹಿತಿ ನೀಡಿ. ಹಾಸ್ಟೆಲ್ ಮಕ್ಕಳು ಮತ್ತು ಸ್ವಸಹಾಯ ಸಂಘಗಳು ಮತ್ತು ವಿವಿಧ ಶಾಲೆಗಳ ಹೆಚ್ವಿನ ಮಕ್ಕಳಿಗೆ ಕರೆತರುವ ಕೆಲಸ ಮಾಡಬೇಕು ಅಂದಾಗ ಹೆಚ್ಚಿನ ಜನರು ಸೇರುತ್ತಾರೆ ಎಂದು ಹೇಳಿದರು.

ಈ ಸಭೆಯಲ್ಲಿ ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ. ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಚಂದ್ರಕಾAತ ಪೂಜಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೆಶಕರಾದ ಸುರೇಖಾ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಚಂದ್ರಕಾAತ ಶಾಬಾದಕರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಸಿಂಧು ಎಚ್.ಎಸ್. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!