ರಾಜ್ಯ

ಅಂಕಿತ ಪುಸ್ತಕದ ವತಿಯಿಂದ 4 ಪುಸ್ತಕಗಳ ಬಿಡುಗಡೆ

ಬೆಂಗಳೂರಿನ ಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಚ್. ಡುಂಡಿರಾಜ್ ಅವರ ‘ಹನಿಟ್ಯ್ರಾಪ್’ ಹನಿಗವನಗಳು, ಅಮಿತಾ ಭಾಗವತ್ ಅವರ ಕಾದಂಬರಿ ‘ನೀಲಿ ನಕ್ಷೆ’, ನಾ. ಮೊಗಸಾಲೆ ಅವರ ಕಾದಂಬರಿ ‘ನೀರು’, ಎನ್.ಸಿ. ಮಹೇಶ್ ಅವರ ‘ಸಾಕುತಂದೆ ರೂಮಿ’ ನಾಟಕ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮವು 2023 ಆಗಸ್ಟ್ 20, ಭಾನುವಾರದಂದು ನಗರದ ಬಸವನಗುಡಿಯ ವಾಡಿಯಾ ರಸ್ತೆಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆಯಿತು.

ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕವಿ, ಕಥೆಗಾರ ಜಯಂತ ಕಾಯ್ಕಿಣಿ, “ಕಾದಂಬರಿಯಲ್ಲಿ ಮುಖ್ಯವಾಗಿ ಬೇಕಾಗಿರುವುದು ಬಿಡಿ ಮತ್ತು ಇಡೀಯ ಹದ. ಆದರೆ ಕಥಾಸಂಕಲನ ಅದಾಗಿಯೇ ಮುಗಿಯುವ ಪರಿಯನ್ನು ಒಳಗೊಂಡಿದೆ. ಕಾದಂಬರಿಯಲ್ಲಿ ಲೇಖಕನೊಬ್ಬನ ಸುದೀರ್ಘ ಕಾಲದ ಒದ್ದಾಟವಿರುತ್ತದೆ. ನಮ್ಮ ದೇಶವೆಂದರೆ ಸಾವಿರ ಕಂಬಗಳ ಚಪ್ಪರವಿದ್ದಂತೆ. ಇಲ್ಲಿ ಸಾಹಿತ್ಯ, ಕಲೆ ಎಲ್ಲವೂ ಇದೆ. ಮನುಷ್ಯ ಜೀವಿಯೊಡನೆ ಮತ್ತೆ ಮತ್ತೆ ಬೆಸೆಯುವ ಕಲೆಯನ್ನು ಸಾಹಿತ್ಯ ಒಳಗೊಂಡಿದೆ.ಇನ್ನು ಇಂದು ಬಿಡುಗಡೆಗೊಂಡಿರುವ ಕೃತಿಗಳು ಒಂದು ತೆರನಾದ ಋಣವನ್ನು ಒಳಗೊಂಡಿದೆ,” ಎಂದು ಅಭಿಪ್ರಾಯಿಸಿದರು.

“ಮನಗಾಣುವುದು ಹಾಗೂ ಮನಗಾಣಿಸುವಂತಹ ಕಲೆಯನ್ನು ರೂಮಿ ಅವರ ಸಾಹಿತ್ಯವೂ ಒಳಗೊಂಡಿದೆ. ಅಂತಹ ಒಬ್ಬ ದಾರ್ಶನಿಕ ವ್ಯಕ್ತಿ ಅವನು. ದರ್ಶನ ಅನ್ನುವ ಶಬ್ಧ ಇಂದಿಗೆ ಬಹಳಷ್ಟು ವಿಚಿತ್ರವಾಗಿ ಕಾಡುತ್ತದೆ. ದಾರ್ಶನಿಕ ಕಲೆಗಳೆಲ್ಲವೂ ದರ್ಶನದ ಕಲೆಗಳಾಗಿದ್ದಾಗ, ಬೇರೆ ಸಂಗತಿಯಾಗಿ ರೂಪವನ್ನು ಪಡೆಯುತ್ತದೆ. ಯಾರೂ ಇಲ್ಲದಿದ್ದರೆ ಏನೂ ಆಗುವುದಿಲ್ಲ ಎಂಬುವುದನ್ನು ಕಟ್ಟಿಕೊಡುತ್ತದೆ,” ಎಂದು ತಿಳಿಸಿದರು.

ಲೇಖಕ ಮತ್ತು ಪತ್ರಕರ್ತ ಜೋಗಿ ಮಾತನಾಡಿ“ಪೂರ್ಣ ಪ್ರಮಾಣದಲ್ಲಿ ಹನಿಗವನಗಳನ್ನು ಪ್ರಕಟ ಮಾಡುವವರು ದಿನಕರ ದೇಸಾಯಿ,ವೈಎನ್ ಕೆ. ಅವರ ನಂತರ ಬಹಳ ಕಡಿಮೆ. ಇತ್ತೀಚೆಗೆ ಹನಿಗನವೆಂದರೆ ನೆನಪಾಗುವುದೇ ಡುಂಡಿರಾಜ್. ಉದಯವಾಣಿಯಲ್ಲಿ ಅವರು ಬರೆಯುತ್ತಿದ್ದ ಸಂಪಾದಕೀಯ ‘ಹನಿಸಂಪಾದಕೀಯ’. ಸಂಪಾದಕೀಯದಲ್ಲಿ ಹೇಗೆ ಒಂದು ವಸ್ತುವನ್ನು ತೆಗೆದುಕೊಂಡು ವಿಮರ್ಶೆ ಮಾಡಿ ಅಲ್ಲಿನ ತಪ್ಪು ಒಪ್ಪುಗಳನ್ನು ಗಮನಿಸಿ ವಿಚಾರ ಮಾಡುತ್ತಾರೋ, ಹಾಗೆಯೇ ಹಿಂದಿನ ದಿನ ನಡೆದಂತಹ ಪ್ರತಿಯೊಂದು ಘಟನೆಗಳನ್ನು ವಿಶ್ಲೇಷಣೆ ಮಾಡಿ ಡುಂಡಿರಾಜ್ ಅವರು ಬರೆಯುತ್ತಿದ್ದರು. ಇನ್ನು ಹೆಂಡತಿಯ ಬಗ್ಗೆ ಅತೀ ಹೆಚ್ಚು ಹನಿಗವನಗಳನ್ನು ಕೆ.ಎಸ್. ನರಸಿಂಹಸ್ವಾಮಿ ಬಿಟ್ಟರೆ ಇವರೇ ಬರೆದಿರುತ್ತಾರೆ,” ಎಂದು ತಿಳಿಸಿದರು.

“11ನೇ ಶತಮಾನದಿಂದ ಇಂದಿನವರೆಗೂ ಹನಿಗವನಗಳು ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿರುತ್ತವೆ. ಅವು ಚುಚ್ಚುತ್ತವೆ, ಹೇಳಲಾಗದ ಭಾವನೆಗಳನ್ನು ತಿಳಿಸುತ್ತದೆ, ಹನಿಗವನಗಳು ನಗಿಸುತ್ತದೆ ಮತ್ತು ಅಳಿಸುತ್ತದೆ ಕೂಡ. ರೂಮಿಯ ಹನಿಗವನ ನಗಿಸುತ್ತದೆ, ಡುಂಡಿರಾಜ್ ಅವರ ಹನಿಗವನ ಅಳಿಸುತ್ತದೆ. ಹೀಗೆ ಅದರ ವಿಸ್ತಾರ ಬಹುವಾಗಿದೆ. ಹನಿಗವಿತೆಗಳನ್ನು ಬರೆಯುತ್ತಾ ನೀವು ನಮ್ಮಲ್ಲಿ ಹುಟ್ಟಿಸಿದ ಸಂತೋಷ ಹಾಗೂ ಎಚ್ಚರ ಬಹಳ ಮುಖ್ಯ,” ಎಂದು ತಿಳಿಸಿದರು.

ಕಥೆಗಾರ ಕೃಷ್ಣಮೂರ್ತಿ ಕರ್ಕಿ ಮಾತನಾಡಿ, “ಅನುಭಗಳ ಗುಚ್ಛವಾಗಿ ಕತೆಗಳು ಮೂಡಿಬರುತ್ತದೆ. ಅಮಿತಾ ಭಾಗವತ್ ಅವರ ಕಾದಂಬರಿಯ ಕಥಾವಸ್ತು ಒಬ್ಬ ಹೆಣ್ಣಿನ ಮನದಾಳದ ವಿಚಾರ, ಆಕೆಯನ್ನು ನೋಡುವ ದೃಷ್ಟಿಕೋನವನ್ನು ವಿವರಿಸುತ್ತದೆ. ಮೊದಲ ಕಾದಂಬರಿಯಲ್ಲಿಯೇ ಕಾದಂಬರಿ ಬಯಸಿದಂತಹ ಹದ ಮತ್ತು ವಿವರಣೆ ಅವಿಗೆ ಸಿಕ್ಕಿದೆ. ಕಾದಂಬರಿ ಯಾವುದೇ ಜೀವನಕ್ಕೆ ಹತ್ತಿರವಾದ ವಿಷಯ ಒಳಗೊಂಡಿದರೆ, ಅದು ಓದುಗನಿಗೂ ಕೂಡ ಹತ್ತಿರವಾದ ಹಾಗೆ ಅನ್ನಿಸುತ್ತದೆ. ಅಂತಹ ಕಾದಂಬರಿಗಳಲ್ಲಿ ನೀಲಿ ನಕ್ಷೆ ಕೂಡ ಒಂದು. ಕಾದಂಬರಿ ಬರೆಯುವುದು ಅಷ್ಟು ಸುಲಭವಲ್ಲ. ಅದು ದೀರ್ಘವಾದ ಸಮಯವನ್ನು ತೆಗೆದುಕೊಳ್ಳುತ್ತದೆ,” ಎಂದರು.

“ಅಣ್ಣ ತಮ್ಮಂದಿರ ಜಗಳ ‘ನೀರು’ ಕಾದಂಬರಿಯ ಕಥಾವಸ್ತು. ಅಣ್ಣ ತಮ್ಮಂದಿರ ಜಗಳದ ಕಥಾಹಮದರವೇ ನಮ್ಮಲ್ಲಿದೆ. ಅದು ರಾಮಾಯಣದಿಂದ ಶುರುಮಾಡಿದರೆ ವಾಲಿ ಸುಗ್ರೀವ, ಕೌರವ-ಪಾಂಡವ, ಭರತ- ಬಾಹುಬಲಿ, ಕನ್ನಡ ಸಾಹಿತ್ಯಕ್ಕೆ ಬಂದರೆ ನೀವು ಕಾನೂರು ಹೆಗ್ಗಡಿಯ ಹೂವ್ವಯ್ಯ ರಾಮಯ್ಯ ಹೀಗೆ ಅನೇಕ ಉದಾಹರಣೆಗಳು ನಮಗೆ ಸಿಗುತ್ತವೆ,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃತಿಗಳ ಲೇಖಕರಾದ ಎಚ್. ಡುಂಡಿರಾಜ್, ಅಮಿತಾ ಭಾಗವತ್, ನಾ. ಮೊಗಸಾಲೆ, ಎನ್.ಸಿ. ಮಹೇಶ್, ಪ್ರಾಣೇಶ್, ಪ್ರಕಾಶ್ ಕಂಬತ್ತಳ್ಳಿ ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!