ಹೆದ್ದಾರಿ ನಿರ್ಮಾಣ ಮನವಿಗೆ ಸ್ಪಂದನೆ- ಶಾಸಕ ಪ್ರಭು ಚವ್ಹಾಣ
ಮಹಾರಾಷ್ಟ್ರದ ವಝರ್ ಬಾರ್ಡರ್ ನಿಂದ ಔರಾದ(ಬಿ) ವರೆಗೆ (ಮಾರ್ಗ-ಎಕಂಬಾ) ರಾಷ್ಟ್ರೀಯ ಹೆದ್ದಾರಿ ಮಂಜೂರು ಮಾಡುವಂತೆ ಸಲ್ಲಿಸಿದ್ದ ಮನವಿಗೆ ಕೇಂದ್ರ ಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಅವರು ಪ್ರತಿಕ್ರಿಯೆ ನೀಡಿದ್ದು, ಹೊಸ ಹೆದ್ದಾರಿ ಮಂಜೂರಾಗುವ ಭರವಸೆಯಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಹಿಂದೆ ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸಚಿವರು ಲಿಖಿತ ಪತ್ರದ ಮುಖಾಂತರ ಕ್ರಮ ವಹಿಸುವ ಕುರಿತು ಪ್ರತಿಕ್ರಿಯಿಸಿದ್ದಾರೆ ಎಂದಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಹಣೆಗಾಂವ್, ಮುಖೇಡ್ ಮೂಲಕ ನಾಂದೇಡ್‌ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 161(ಎ) ನನ್ನ ಮತಕ್ಷೇತ್ರಕ್ಕೆ ಹೊಂದಿಕೊಂಡಿದೆ. ಈ ರಸ್ತೆ ಹಾದು ಹೋಗುವ ಮಹಾರಾಷ್ಟ್ರದ ವಝರ್ ಬಾರ್ಡರ್ ನಿಂದ ನನ್ನ ಮತಕ್ಷೇತ್ರದ ಔರಾದ(ಬಿ) ತಾಲ್ಲೂಕು ಕೇಂದ್ರ ಕೇವಲ 10 ಕಿ.ಮೀ ಅಂತರದಲ್ಲಿದೆ. ಏಕಂಬಾ ಮಾರ್ಗವಾಗಿ ಔರಾದ(ಬಿ) ವರೆಗೆ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಕಲ್ಪಿಸಿದರೆ ಎರಡೂ ರಾಜ್ಯಗಳ ಜನತೆಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದೆ.
ರಾಜ್ಯದ ಗಡಿಯಲ್ಲಿರುವ ಔರಾದ(ಬಿ) ತಾಲ್ಲೂಕಿನ ಬಹಳಷ್ಟು ಜನ ಮಹಾರಾಷ್ಟ್ರದ ವಿವಿಧ ನಗರಗಳೊಂದಿಗೆ ವಹಿವಾಟು ಹೊಂದಿದ್ದಾರೆ. ಎಕಂಬಾ ಮಾರ್ಗವಾಗಿ ಹೊಸ ಹೆದ್ದಾರಿ ನಿರ್ಮಿಸುವುದು ಬಹಳ ಅಗತ್ಯವಿದೆ ಎಂದು ಮನವರಿಕೆ ಮಾಡಲಾಗಿತ್ತು. ನನ್ನ ಮನವಿಗೆ ಕೇಂದ್ರ ಸಚಿವರು ಸ್ಪಂದಿಸಿದ್ದು, ಹೊಸ ಹೆದ್ದಾರಿ ಮಂಜೂರು ಮಾಡಿಕೊಡುತ್ತಾರೆ ಎನ್ನುವ ಭರವಸೆಯಿದೆ ಎಂದು ಶಾಸಕರು ತಿಳಿಸಿದ್ದಾರೆ.