ಹಾಲು ಮತ ಧರ್ಮ ಮಹಾಸಭೆಯಲ್ಲಿ ಒಕ್ಕೊರಲ ನಿರ್ಣಯ ಮಾಸಾಶನಕ್ಕೆ ಒತ್ತಡ: ಬೆಂಗಳೂರಲ್ಲಿ ಶೀಘ್ರ ಸಭೆ
ಬೀದರ್: ಮಾಸಾಶನಕ್ಕಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಹಾಲು ಮತ ಧರ್ಮದ ಜಡಿತಲೆ, ವಗ್ಗೇರ ಮತ್ತು ಪಟ್ಟದ ಪೂಜಾರಿಗಳು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಸಭೆ ನಡೆಸಲು ನಿರ್ಧರಿಸಿದ್ದಾರೆ.
ಭಾಲ್ಕಿ ತಾಲ್ಲೂಕಿನ ಖಾನಾಪುರದ ಮಲ್ಲಣ್ಣ ದೇವಸ್ಥಾನದಲ್ಲಿ ನಡೆದ ಹಾಲು ಮತ ಧರ್ಮದ ಹತ್ತನೇ ಮಹಾಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಾಲು ಮತ ಧರ್ಮದ ಜಡಿತಲೆ, ವಗ್ಗೇರ ಮತ್ತು ಪಟ್ಟದ ಪೂಜಾರಿಗಳಿಗೆ ಮಾಸಾಶನ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ಪೂರ್ವದಲ್ಲಿ ಆಶ್ವಾಸನೆ ನೀಡಿದ್ದರು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವ ಕಾರಣ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಪೂಜಾರಿಗಳು ಒತ್ತಾಯಿಸಿದರು.
ರಾಜ್ಯದ ಪ್ರತಿ ಗ್ರಾಮಗಳಲ್ಲೂ ಇರುವ ಬೀರೇಶ್ವರ ಮಂದಿರಗಳ ಜೀರ್ಣೋದ್ಧಾರಕ್ಕೆ ಅನುದಾನ ಕಲ್ಪಿಸಬೇಕು ಎಂದು ಬೇಡಿಕೆ ಮಂಡಿಸಿದರು.
ವಿಜಯಪುರ ಜಿಲ್ಲೆಯ ನಾಗಠಾಣದ ಬೀರೇಶ್ವರ ಮಂದಿರದ ಮಾಳಿಂಗರಾಯ ಮಹಾರಾಯರು ಸಾನಿಧ್ಯ ವಹಿಸಿದ್ದರು. ಬಸವಕಲ್ಯಾಣ ತಾಲ್ಲೂಕಿನ ಗೌರ ಗ್ರಾಮದ ಬೀರಪ್ಪ ಪೂಜಾರಿ, ಭಾಲ್ಕಿ ತಾಲ್ಲೂಕಿನ ಉಚ್ಚಾದ ಗೋಪಾಲ್ ಪೂಜಾರಿ ಸಮ್ಮುಖ ವಹಿಸಿದ್ದರು. ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಂಡಿತರಾವ್ ಚಿದ್ರಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಚಿದ್ರಿ, ಮಲ್ಲಣ್ಣ ದೇವಸ್ಥಾನದ ನಿರ್ದೇಶಕ ಪಂಡಿತ ಕೌಠಾ, ಪ್ರಕಾಶ ಪೂಜಾರಿ, ವಿಜಯಪುರದ ಬೀರಪ್ಪ ಜಮನಾಳ, ಕಲಬುರಗಿಯ ಬಸವರಾಜ, ಧನರಾಜ, ಕಾಂಗ್ರೆಸ್ ಜಿಲ್ಲಾ ಎಸ್.ಟಿ. ಘಟಕದ ಅಧ್ಯಕ್ಷ ರಾಕೇಶ ಚಿನ್ನಪ್ಪನೋರ ಕುರುಬಖೇಳಗಿ ಇದ್ದರು.