ಹವಾ ಮಲ್ಲಿನಾಥ ಮಹಾರಾಜರ ಜನ್ಮದಿನ ವಿಶಿಷ್ಟ ಆಚರಣೆ ಯುವಜನರಿಂದ ರಕ್ತದಾನ, ಹೆಲ್ಮೆಟ್ ಉಚಿತ ವಿತರಣೆ
ಬೀದರ್: ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ಜನ್ಮದಿನವನ್ನು ವಿವಿಧ ಸಾಮಾಜಿಕ ಕಾರ್ಯಗಳೊಂದಿಗೆ ಇಲ್ಲಿಯ ಐ.ಎಂ.ಎ. ಹಾಲ್ ಸಮೀಪದ ಓಂ ನಮಃ ಶಿವಾಯ ಆಶ್ರಮದಲ್ಲಿ ಸೋಮವಾರ ವಿಶಿಷ್ಟವಾಗಿ ಆಚರಿಸಲಾಯಿತು.
57ನೇ ಜನ್ಮದಿನದ ಸವಿನೆನಪಿಗಾಗಿ 57 ಕೆ.ಜಿ. ತೂಕದ ಬೃಹತ್ ಕೇಕ್ ಕತ್ತರಿಸಲಾಯಿತು. 121 ಬೈಕ್ ಸವಾರರಿಗೆ ಹೆಲ್ಮೆಟ್ ಉಚಿತವಾಗಿ ವಿತರಿಸಿ ರಸ್ತೆ ಸುರಕ್ಷತಾ ನಿಯಮಗಳ ಅರಿವು ಮೂಡಿಸಲಾಯಿತು. ಮಾಜಿ ಸೈನಿಕರು, ರೈತರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಸಾರ್ವಜನಿಕರ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. 68 ಯುವಜನರು ರಕ್ತದಾನ ಮಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಸಮಾರಂಭದಲ್ಲಿ ಮಠಾಧೀಶರು, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಗಣ್ಯರು ಹವಾ ಮಲ್ಲಿನಾಥ ಮಹಾರಾಜರ ಸಮಾಜೋ ಧಾರ್ಮಿಕ ಕಾರ್ಯಗಳನ್ನು ಕೊಂಡಾಡಿದರು.
ಸಂಸದ ಸಾಗರ್ ಖಂಡ್ರೆ ಮಾತನಾಡಿ, ಹವಾ ಮಲ್ಲಿನಾಥ ಮಹಾರಾಜರು ಧಾರ್ಮಿಕ ಚಟುವಟಿಕೆಗಳ ಜತೆಗೆ ಜನರಲ್ಲಿ ರಾಷ್ಟ್ರಪ್ರೇಮ ಬೆಳೆಸುವ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಶ್ರೀಗಳು ದೇಶದಾದ್ಯಂತ ಮಠ-ಮಾನ್ಯಗಳನ್ನು ಸ್ಥಾಪಿಸಿ ಭಕ್ತರಿಗೆ ಸನ್ಮಾರ್ಗ ತೋರುತ್ತಿದ್ದಾರೆ ಎಂದು ತಿಳಿಸಿದರು.
ಜೈ ಭಾರತ ಮಾತಾ ಸೇವಾ ಸಮಿತಿಯ ಭಾಲ್ಕಿ ತಾಲ್ಲೂಕು ಅಧ್ಯಕ್ಷರೂ ಆದ ಕಾರ್ಯಕ್ರಮದ ರೂವಾರಿ ಪಪ್ಪು ಪಾಟೀಲ ಖಾನಾಪುರ ಮಾತನಾಡಿ, ಹವಾ ಮಲ್ಲಿನಾಥ ಮಹಾರಾಜರು ಸಮಾಜ ಹಾಗೂ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಸತ್ಕಾರ್ಯಗಳು ಇತರರಿಗೆ ಪ್ರೇರಣೆಯಾಗಲಿ ಎನ್ನುವ ಸದುದ್ದೇಶದಿಂದ ಪ್ರತಿ ವರ್ಷ ಜನ್ಮದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಹುಲಸೂರಿನ ಶಿವಾನಂದ ಸ್ವಾಮೀಜಿ, ಮಳಚಾಪುರದ ಸಿದ್ಧಾರೂಢ ಆಶ್ರಮದ ಸದ್ರೂಪಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗಂಗಾಧರ ಶಾಸ್ತ್ರಿ, ವಿಧಾನ ಪರಿಷತ್ ಸದಸ್ಯ ಮಾರುತಿರಾವ್ ಮುಳೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್, ಡಿವೈಎಸ್ಪಿ ಶಿವನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಹಿರಿಯ ಪತ್ರಕರ್ತ ಸದಾನಂದ ಜೋಶಿ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಮುಖಂಡರಾದ ಕಾಶೀನಾಥ ಬೆಲ್ದಾಳೆ, ಮಾರುತಿ ಬೌದ್ಧೆ ಮುಖ್ಯ ಅತಿಥಿಯಾಗಿದ್ದರು.
ಪ್ರಮುಖರಾದ ಮಾಣಿಕ ಮೇತ್ರೆ, ನಂದೇಶ್ ಪಾಟೀಲ, ಆನಂದ ರಾಂಪುರೆ, ಆದಿತ್ಯ, ಲೋಕೇಶ್, ನಾಗೇಶ ಬೆಮಳಖೇಡ, ಸಾಗರ್ ಪಾಟೀಲ, ಸಂಗಮೇಶ ಚಂದಾಪುರೆ, ವೀರಶೆಟ್ಟಿ ಖ್ಯಾಮಾ, ಕೃಷ್ಣ, ರಾಹುಲ್, ಶಿವಕುಮಾರ ಮದನೂರ, ಭರತ್ ಬಿ.ಕೆ, ರವಿ ಮಲ್ಕಾಪುರ, ಬಲಬೀರ ಪಾಟೀಲ, ಸಿದ್ದು ಮಮದಾಪುರೆ, ನಿತೀಶ್ ಪಾಟೀಲ, ಸುರೇಶ ಪೂಜಾರಿ, ಅಂತು, ಸಂದೀಪ್, ವೀರಶೆಟ್ಟಿ ಕೊಳಾರ, ಓಂಕಾರ, ರೋಹಿತ್, ಸಾಗರ್ ಎಕಲಾರ್, ಭವನ್, ಮಲ್ಲಿಕಾರ್ಜುನ, ಆನಂದ ಪಾಟೀಲ, ಈಶ್ವರ, ಸತೀಶ್, ರಾಜು, ವಿನೋದ್, ಆಕಾಶ ಎಕಲಾರ್ ಮತ್ತಿತರರು ಇದ್ದರು. ದೀಪಕ್ ಥಮಕೆ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮದರ್ ತೆರೆಸಾ ಅವರ ಜಯಂತಿಯನ್ನೂ ಆಚರಿಸಲಾಯಿತು.
ಇದಕ್ಕೂ ಮುನ್ನ ಜೈ ಭಾರತ ಮಾತಾ ಸೇವಾ ಸಮಿತಿಯ ಪದಾಧಿಕಾರಿಗಳು ನಗರದ ಪ್ರಮುಖ ಮಾರ್ಗಗಳಲ್ಲಿ ಇರುವ ಮಹಾತ್ಮರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.