ಹಲವು ಹುದ್ದೆಗಳು ಖಾಲಿ ಭರ್ತಿಗೆ : ಸಚಿವ ಈಶ್ವರ ಖಂಡ್ರೆ ಸೂಚನೆ
ಬೀದರ್, ಆ.11: ಕಲ್ಯಾಣ ಕರ್ನಾಟಕದ ಸರ್ಕಾರಿ ಕಚೇರಿಗಳಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಇವುಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿಂದು ಪೌರಾಡಳಿತ ಖಾತೆ ಸಚಿವ ರಹೀಂ ಖಾನ್ ಅವರೊಂದಿಗೆ ನಗರೋತ್ಥಾನ, ಅಮೃತ ನಗರೋತ್ಥಾನ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಬೀದರ್, ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್, ಚಿಟಗುಪ್ಪಾ, ಹಳ್ಳಿಖೇಡ (ಬಿ) ಮತ್ತು ಔರಾದ್ ಪಟ್ಟಣ ಪಂಚಾಯ್ತಿಯಲ್ಲಿ 733 ಹುದ್ದೆಗಳು ಖಾಲಿ ಇದ್ದು, ಇದರಿಂದ ಸಾರ್ವಜನಿಕರಿಗೆ ಸರ್ಕಾರಿ ಸೇವೆ ಪಡೆಯಲು ತೊಡಕಾಗುತ್ತಿದೆ. ಹೀಗಾಗಿ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಕೆ.ಪಿ.ಎಸ್.ಸಿ., ನೇಮಕಾತಿ ಪ್ರಕ್ರಿಯೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಬೇಕು ಎಂದು ಸೂಚಿಸಿದರು.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳಿಂದ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿದ ಸಚಿವರು, ಟೆಂಡರ್ ಪ್ರಕ್ರಿಯೆಯ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ತ್ವರಿತವಾಗಿ ಟೆಂಡರ್ ಕರೆದು ಗುಣಮಟ್ಟದ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
15ನೇ ಹಣಕಾಸು ಆಯೋಗದ 2020-21ರಿಂದ 2022-23ರ ಸಾಲಿನವರೆಗೆ ಬೀದರ್ ಜಿಲ್ಲೆಗೆ ಲಭಿಸಿರುವ ಅನುದಾನದ ಬಿಡುಗಡೆಯಾಗಿರುವ ಮೊತ್ತ ಮತ್ತು ಬಳಕೆಯಾಗಿರುವ ಮೊತ್ತದ ವಿವರ ಪಡೆದ ಸಚಿವರು ಅನುದಾನವನ್ನು ಸಮರ್ಪಕವಾಗಿ ಮತ್ತು ಸೂಕ್ತವಾಗಿ ಬಳಕೆ ಮಾಡುವಂತೆ ತಿಳಿಸಿದರು.
ಬೀದರ್ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ತ್ವರಿತವಾಗಿ ಕಾರ್ಯಗತ ಮಾಡುವಂತೆ ಸೂಚಿಸಿದ ಸಚಿವರು, ಬೀದರ್ ಜಿಲ್ಲೆಯ ಜನತೆಯ ಜೀವನಮಟ್ಟ ಸುಧಾರಣೆಗೆ ಮತ್ತು ಸುಗಮ ಜೀವನಕ್ಕೆ ಒತ್ತು ನೀಡಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್ ಮತ್ತು ಪೌರಾಡಳಿತ ಇಲಾಖೆ ನಿರ್ದೇಶಕಿ ಮಂಜುಶ್ರೀ ಉಪಸ್ಥಿತರಿದ್ದರು.