ಸ್ವತಂತ್ರ ಹೋರಾಟದ ತೇರನೆಳೆಯಲು ಯುವಕರು ಸಜ್ಜಾಗಿ – ಸಿದ್ರಾಮ ಪಾರಾ
ಬೀದರ: ಮಣ್ಣು ಮತ್ತು ದೇಶ ಇವೆರಡು ಒಂದೇ ನಾಣ್ಯದ ಎರಡು ಮುಖಗಳು. ಮಣ್ಣಿಗೆ ಮಾತೃಭೂಮಿ ಎಂದು ಕರೆಯುತ್ತಾರೆ. ವಿಶ್ವದಲ್ಲಿ ಅತ್ಯಂತ ಸಂಪದ್ಭರಿತ ಮತ್ತು ಫಲವತ್ತತೆ ಹೊಂದಿದ ದೇಶ ಭಾರತ. ಹೀಗಾಗಿ ಭಾರತ ಪವಿತ್ರ ಮಣ್ಣಿಗೆ ವಿಶ್ವವೇ ಇಂದು ತಲೆಬಾಗುತ್ತಿದೆ. ವಿದೇಶಿಗರು ಭಾರತಕ್ಕೆ ಬಂದಾಗಲೆಲ್ಲ ಭಾರತ ಮಣ್ಣನ್ನು ತಮ್ಮ ತಲೆಮೇಲೆ ಹಾಕಿಕೊಂಡು ಗೌರವ ಕೊಡುತ್ತಾರೆ ಎಂದು ಮಾತೆ ಮಾಣಿಕೇಶ್ವರಿ ಕಾಲೇಜಿನ ಪ್ರಾಚಾರ್ಯ ಲೋಕೇಶ ಉಡಬಾಳೆ ತಿಳಿಸಿದರು.
ದಕ್ಷಿಣ ಮಧ್ಯ ವಲಯ ಸಾಂಸ್ಕøತಿಕ ಕೇಂದ್ರ ನಾಗಪುರ, ಕರ್ನಾಟಕ ಸಾಹಿತ್ಯ ಸಂಘ, ಬೀದರ ಹಾಗೂ ಕರ್ನಾಟಕ ಕಾಲೇಜು ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವದ ಪ್ರಯುಕ್ತ ನಮ್ಮ ಮಣ್ಣು ನಮ್ಮ ದೇಶ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿದರು.
ನಮ್ಮ ದೇಶದ ಮಣ್ಣಿಗೆ ಋಷಿಮುನಿಗಳ, ದೇವಾನುದೇವತೆಗಳ ಮತ್ತು ಪ್ರಕೃತಿ ಮಾತೆಯ ಆಶೀರ್ವಾದವಿದೆ. ಬೆಟ್ಟಗುಡ್ಡ, ಅರಣ್ಯ-ಕಾಡು, ಸಮುದ್ರ-ನದಿಗಳು ಮತ್ತು ಮುತ್ತ-ರತ್ನಗಳಂತಹ ವಜ್ರವೈಢೂರ್ಯಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಮಾರಾಟ ಮಾಡಿದ ದೇಶ ನಮ್ಮ ಭಾರತ. ಇಂತಹ ಭಾರತವನ್ನು ಗೌರವಿಸೋಣ. ಪ್ರೀತಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಕರಾಶಿ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ ಮಾತನಾಡಿ ಈ ಹಿಂದೆ ಅನೇಕ ಜನ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ತಮ್ಮ ಪ್ರಾಣ ಬಲಿದಾನಗೈದಿದ್ಧಾರೆ. ಆದ್ದರಿಂದ ಸ್ವಾತಂತ್ರ್ಯ ಹೋರಾಟದ ತೇರನೆಳೆಯಲು ಯುವಕರು ಸಜ್ಜಾಗಿ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಜಗನ್ನಾಥ ಹೆಬ್ಬಾಳೆ ವಿದ್ಯಾರ್ಥಿಗಳಿಗೆ ಪಠ್ಯಚಟುವಟಿಕೆ ಜೊತೆಗೆ ದೇಶಭಕ್ತಿಯ ಬಗ್ಗೆ ತಿಳಿಸಿಕೊಡುವುದೇ ಈ ಕಾರ್ಯಕ್ರಮದ ಉದ್ದೇಶ. ಯುವಕರು ಮಾತೃಭೂಮಿ ಬಗ್ಗೆ ಕಾಳಜಿ ವಹಿಸಬೇಕು. ತ್ಯಾಗಿಗಳ ಕುರಿತು ಅರಿಯಬೇಕು. ಹಿರಿಯರು ಕೊಟ್ಟಿದ್ದೇನು? ನಾವು ಮಾಡುತ್ತಿರುವುದೇನು ಎಂಬ ಕುರಿತು ಆತ್ಮಾವಲೋಕ ಮಾಡಿಕೊಳ್ಳುವ ಕಾಲವಿದು. ಹೆತ್ತ ತಾಯಿಗೆ ಕಾಳಜಿ ಮಾಡಿದಂತೆ ಹೊತ್ತ ಭಾರತ ಮಾತೆಯ ಉಳಿವಿಗೂ ಪ್ರತಿಯೊಬ್ಬರೂ ಕಾಳಜಿವಹಿಸಬೇಕೆಂದು ಕರೆ ನೀಡಿದರು. ಬೀದರ ಜಿಲ್ಲೆಯಲ್ಲಿ ನೂರಾರು ಜನ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅವರ ಹೋರಾಟದ ಶೌರ್ಯ, ಆತ್ಮಸ್ಥೈರ್ಯ, ಧೈರ್ಯ, ಛಲ ಕುರಿತು ಈ ಕಾರ್ಯಕ್ರಮದ ಮೂಲಕ ಅರಿಯೋಣ ಎಂದು ತಿಳಿಸಿದರು.
ಕರಾಶಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿದರು. ಉಪಪ್ರಾಂಶುಪಾಲರಾದ ಅನೀಲಕುಮಾರ ಚಿಕ್ಕಮಾಣುರ ಸ್ವಾಗತಿಸಿದರು. ಡಾ. ಸುನಿತಾ ಕೂಡ್ಲಿಕರ್ ನಿರೂಪಿಸಿದರು. ಡಾ. ಮಹಾನಂದ ಮಡಕಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಡಾ. ಮಾದಯ್ಯ ಸ್ವಾಮಿ, ಡಾ. ಸಂಗಪ್ಪ ತೌಡಿ, ಶ್ರೀಮತಿ ಮಾನಾ ಸಂಗೀತಾ, ಮಹಾರುದ್ರ ಡಾಕುಳಗೆ, ಶಿವಶರಣಪ್ಪ ಗಣೇಶಪುರ ಉಪಸ್ಥಿತರಿದ್ದರು. ಪ್ರಕಾಶ ಮತ್ತು ಪ್ರೀತಮ್ ಕುಚಬಾಳ ಮತ್ತು ಆಶಾ ಅನೀಲಕುಮಾರ ಅವರಿಂದ ದೇಶಭಕ್ತಿಗೀತೆಗಳ ಗಾಯನ ಜರುಗಿತು.