ಸ್ತನ್ಯಪಾನದಿಂದ ಕ್ಯಾನ್ಸರ್‍ದಂತಹ ರೋಗಗಳು ದೂರ – ಡಾ. ಸೋಯಲ್
ಬೀದರ: ವಿಶ್ವ ಸ್ತನ್ಯಪಾನ ಸಪ್ತಾಹ ಇದೊಂದು ವಾರ್ಷಿಕ ಆಚರಣೆಯಾಗಿದ್ದು, ಇದನ್ನು ಪ್ರತೀ ವರ್ಷ ಆಗಸ್ಟ್ 1 ರಿಂದ 7ರ ವರೆಗೆ 120ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತದೆ. ಒಂದೇ ದಿನ ಆಚರಣೆ ಮಾಡುವುದರಿಂದ ಜಾಗೃತಿ ಆಗುವುದಿಲ್ಲ ಎನ್ನುವ ಕಾರಣಕ್ಕೆ ಒಂದು ವಾರ ಆಚರಣೆ ಮಾಡುತ್ತ ತಾಯಂದಿರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಸ್ತನ್ಯಪಾನದಿಂದ ತಾಯಿ ಮತ್ತು ಮಕ್ಕಳಲ್ಲಿ ಕ್ಯಾನ್ಸರ್, ಬಿಪಿ ಮತ್ತು ಶುಗರ್‍ದಂತಹ ರೋಗಗಳು ಸುಳಿಯುವುದಿಲ್ಲ ಎಂದು ನೂರು ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸೋಯಲ್ ತಿಳಿಸಿದರು.
ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಮುದಾಯ ವೈದ್ಯಶಾಸ್ತ್ರ ವಿಭಾಗ, ನಗರ ಆರೋಗ್ಯ ತರಬೇತಿ ಕೇಂದ್ರ ಬೀದರ ಮತ್ತು ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಳೆಯ ಸಿಟಿ ಬೀದರ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಸ್ತನ್ಯಪಾನ ಸಪ್ತಾಹ 2023ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸ್ತನ್ಯಪಾನ ಎಂಬುದು ಕೇವಲ ಪೌಷ್ಟಿಕ ಆಹಾರವಲ್ಲ. ಬದಲಾಗಿ ಅದು ತಾಯಿ ಮಗುವಿನ ಆರೋಗ್ಯ ಸುಧಾರಣೆ ಮಾಡುತ್ತದೆ. ಸ್ತನ್ಯಪಾನ ಮಗುವಿನ ಮಲಬದ್ಧತೆ, ಅಸ್ತಮಾ, ಕಿವಿಯ ಸೋರುವಿಕೆಯಿಂದ ರಕ್ಷಣೆ ಮಾಡುತ್ತದೆ. ಸ್ತನ್ಯಪಾನ ಮಾಡಿದ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಬಿಪಿ ಶುಗರ್ ಮತ್ತು ಕ್ಯಾನ್ಸರ್ ಬರುವುದಿಲ್ಲ. ಇದೆಲ್ಲದಕ್ಕಿಂತ ಹೆಚ್ಚಾಗಿ ತಾಯಿ ಮಗುವಿನ ನಡುವಿನ ಬಾಂಧವ್ಯ ವೃದ್ದಿಯಾಗುತ್ತದೆ ಎಂದು ಡಾ. ಸೊಯೆಲ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಲ್ಲವಿ ಕೇಸರಿ ವಹಿಸಿ ಮಾತನಾಡಿ “ಮೊದಲ 30 ರಿಂದ 60 ನಿಮಿಷಗಳವರೆಗೆ ಮಗು ಹೆಚ್ಚು ಸಕ್ರಿಯವಾಗಿರುತ್ತದೆ. ಈ ಸಮಯದಲ್ಲಿ ಮಗುವಿನ ಹೀರುವ ಪ್ರತಿಕ್ರಿಯೆಯು ಉತ್ತಮವಾಗಿರುತ್ತದೆ. ತಾಯಿಯು ಹಾಲು ಕುಡಿಸಲು ಬೇಗ ಆರಂಭ ಮಾಡಿದರೆ ಯಶಸ್ವಿಯಾಗಿ ಸ್ತನ್ಯಪಾನ ಮಾಡಿಸಬಹುದು. ಮೊದಲ ಹಾಲಿನಿಂದ ಬರುವ ಹಳದಿ ದ್ರವದ ಕೊಲೊಸ್ಟ್ರಮ್ ಮಗುವನ್ನು ಸೋಂಕಿನಿಂದ ರಕ್ಷಣೆ ಮಾಡುತ್ತದೆ. ಆದ್ದರಿಂದ ತಾಯಂದಿರು ಸೌಂದರ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಗುವಿನ ಭವಿಷ್ಯ ಹಾಳುಗೆಡವದಿರಿ ಎಂದು ಸಲಹೆ ನೀಡಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ಸರೋಜಾ ಪಾಟೀಲ, ಡಾ. ದಿಲೀಪ ರಾಠೋಡ್, ಡಾ. ಧನಂಜಯ್ ನಾಯಕ್, ಡಾ. ಸಂಗೀತಾ, ರವೀಂದ್ರ ರಾಠೋಡ್, ಆಮುಲ್ ಕಾಂಬ್ಳೆ, ಪಲ್ಲವಿ ಬಲಭೀಮ್, ಅರುಣ ಸೇರಿದಂತೆ ಇನ್ನಿತರ ವೈದ್ಯಕೀಯ ವಿದ್ಯಾರ್ಥಿಗಳು, ಹಳೆಯ ನಗರದ ತಾಯಂದಿರು, ಮಕ್ಕಳು ಸೇರಿದಂತೆ ಇತರರು ಹಾಜರಿದ್ದರು. ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಆಮೋಲ್ ಕಾಂಬಳೆ ನಿರೂಪಿಸಿದರು. ರವೀಂದ್ರ ರಾಠೋಡ್ ವಂದಿಸಿದರು.