ಬೀದರ್

ಸುಂದರ ಸಮಾಜದ ನಿರ್ಮಾಣದಲ್ಲಿ ಶಿಕ್ಷಕಕರ ಪಾತ್ರ ಮಹತ್ವದ್ದು : ಪ್ರೊ.ಬಿ.ಎಸ್.ಬಿರಾದಾರ

ಸುಂದರ, ಸ್ವಸ್ಥ, ಸದೃಢ, ಸಮೃದ್ಧ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರರವರು ನುಡಿದರು. ಅವರು ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಆದರ್ಶ ಗುರು ಸದಾ ವಿದ್ಯಾರ್ಥಿಗಳ ಪ್ರೀತಿಗೆ, ಭಕ್ತಿಗೆ ಪಾತ್ರನಾಗಿರುತ್ತಾನೆ. ಕೇವಲ ಸಂಬಳಕ್ಕಾಗಿ ದುಡಿಯುವವ ಗುರುವಲ್ಲ. ಸತತ ಅಭ್ಯಾಸ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ಶ್ರಮಪಡುವವನೇ ನಿಜವಾದ ಗುರು. ಶಿಕ್ಷಕರ ಮೇಲೆ ಮಹತ್ವದ ಜವಾಬ್ದಾರಿಯಿದೆ. ಉತ್ತಮ ಶಿಕ್ಷಕನಿಂದ ಮಾತ್ರ ಸುಂದರ, ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಸ್ವತಃ ತಂದೆ ತಾಯಿಗಳಿಗಿಂತಲೂ ತಮ್ಮ ಅಧ್ಯಾಪಕ, ಗುರುವಿನಲ್ಲಿ ವಿದ್ಯಾರ್ಥಿ ದೃಢವಾದ ನಂಬಿಕೆ ವಿಶ್ವಾಸವಿಟ್ಟಿರುತ್ತಾನೆ. ಹಾಗಾಗಿ ಗುರುವನ್ನು ನಂಬಿ ಜ್ಞಾನಾರ್ಜನೆಗಾಗಿ ಬರುವ ವಿದ್ಯಾರ್ಥಿಗಳನ್ನು ಮಕ್ಕಳಂತೆ ಜ್ಞಾನಧಾರೆಯೆರೆಯುವುದು ಯೋಗ್ಯ ಶಿಕ್ಷಕನ ಕರ್ತವ್ಯ. ಅಂತಹ ಸಮರ್ಥ ಆ ಮೂಲಕ ಗುರುವೆನಿಸಿಕೊಳ್ಳುವವನು ವಿದ್ಯಾರ್ಥಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿರುತ್ತಾನೆ. ಅಂತಹ ಗುರುಗಳ, ಅಧ್ಯಾಪಕರ ಅವಶ್ಯಕತೆಯಿದೆ. ಗುರು ಗುರುವಾಗಿರಬೇಕೇ ವಿನಃ ಲಘುವಾಗಿರಬಾರದು ಎಂದರು.
ವೇದಿಕೆಯಲ್ಲಿದ್ದ ಅತಿಥಿಗಳಾಗಿದ್ದ ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯಕರವರು ಮಾತನಾಡುತ್ತ ಶಿಕ್ಷಕರನ್ನು ವಿದ್ಯಾರ್ಥಿಗಳು ಅನುಕರಿಸುತ್ತಾರೆ. ಆದ್ದರಿಂದ ಶಿಕ್ಷಕರು ತಮ್ಮ ನಡೆ, ನುಡಿ, ವೇಶಭೂಷಣದಲ್ಲಿಯೂ ಶಿಸ್ತನ್ನು ಕಾಪಾಡಿಕೊಳ್ಳವುದು ಅವಶ್ಯಕವಾಗಿದೆ ಎಂದರು. ದ್ರೋಣಾಚಾರ್ಯರು ಕೌರವರು ಹಾಗೂ ಪಾಂಡವರೀರ್ವರಿಗೂ ವಿದ್ಯೆ ಧಾರೆಯೆರೆದರು. ಆದರೆ ಈರ್ವರೂ ಅದನ್ನು ಅವರು ಸ್ವೀಕರಿಸಿದ್ದೇ ವಿಭಿನ್ನವೆಂದರು. ವಿದ್ಯೆ ಮಾನವನನ್ನು ಮಹಾಮಾನವನನ್ನಾಗಿ ನಿರ್ಮಿಸಬೇಕೆಂದರು. ವೇದಿಕೆಯಲ್ಲಿ ಸ್ನಾತಕೋತ್ತರ ಕೇಂದ್ರ ಹಾಲಹಳ್ಳಿಯ ವಿಶೇಷಾಧಿಕಾರಿಗಳು ಮಾತನಾಡುತ್ತ ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನ ಪಡೆಯಬೇಕೆಂದರು. ಕಾರ್ಯಕ್ರಮದಲ್ಲಿ ಡಾ.ರಾಮಚಂದ್ರ ಗಣಾಪೂರ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಕು.ಅರ್ಚನಾ, ಮಲ್ಲಯ್ಯಸ್ವಾಮಿ , ಅಧ್ಯಾಪಕರಾದ ಡಾ.ಮಿಲಿನ್, ಡಾ.ಮುಸ್ತಾಖೀನ್‌ರವರು ಮಾತನಾಡಿದರು. ಡಾ.ಅಂಬರೀಶ ವೀರನಾಯಕ ವಂದಿಸಿದರು, ಡಾ.ಶಿವಕುಮಾರ ಸಂಗನ್‌ರವರು ನಿರೂಪಿಸಿದರು.

Ghantepatrike kannada daily news Paper

Leave a Reply

error: Content is protected !!