ಸಾಮಾಜಿಕ ಚಟುವಟಿಕೆ ಬೀದರ್ ರೋಟರಿ ಕ್ಲಬ್ ಮುಂಚೂಣಿ : ರೋಟರಿ ಗವರ್ನರ್ ಸಿ.ಎ. ಸಾಧುಗೋಪಾಲಕೃಷ್ಣ
ಬೀದರ್: ಸಾಮಾಜಿಕ ಚಟುವಟಿಕೆಗಳಲ್ಲಿ ಬೀದರ್‍ನ ರೋಟರಿ ಕ್ಲಬ್‍ಗಳು ಮುಂಚೂಣಿಯಲ್ಲಿವೆ ಎಂದು ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಗವರ್ನರ್ ಸಿ.ಎ. ಸಾಧುಗೋಪಾಲಕೃಷ್ಣ ಶ್ಲಾಘಿಸಿದರು.
ನಗರದ ಜನವಾಡ ರಸ್ತೆಯಲ್ಲಿ ಇರುವ ಮ್ಯಾಸ್ಟಿಫ್ ಸೆಲೆಕ್ಟ್ ಹೋಟೆಲ್‍ನಲ್ಲಿ ಈಚೆಗೆ ನಡೆದ ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಕ್ಲಬ್‍ಗಳು ಶಿಕ್ಷಣ, ಆರೋಗ್ಯ, ಪರಿಸರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ಮಾಡುತ್ತಿವೆ ಎಂದು ತಿಳಿಸಿದರು.
ಕ್ಲಬ್ ನೂತನ ಅಧ್ಯಕ್ಷ ಗುಂಡಪ್ಪ ಘೋದೆ ಮಾತನಾಡಿ, ರೋಟರಿ ಸಂಸ್ಥೆ ಆಯ್ಕೆ ಮಾಡಿಕೊಂಡು ಏಳು ಕ್ಷೇತ್ರಗಳಲ್ಲಿ ಕ್ಲಬ್ ಕೆಲಸ ಮಾಡಲಿದೆ. ಜನರ ಜೀವನಮಟ್ಟ ಸುಧಾರಣೆಗೆ ಪ್ರಯತ್ನಿಸಲಿದೆ ಎಂದು ಹೇಳಿದರು.
ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಆಣದೂರೆ ಮಾತನಾಡಿ, ಒಂದು ವರ್ಷದ ಅವಧಿಯಲ್ಲಿ ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಕ್ಲಬ್ ಬೆಳ್ಳಿಹಬ್ಬ ಅದ್ಧೂರಿಯಾಗಿ ಆಚರಿಸಿರುವುದು ಸಂತೃಪ್ತಿ ನೀಡಿದೆ ಎಂದು ತಿಳಿಸಿದರು.
ಕ್ಲಬ್ ಹಿರಿಯ ಸದಸ್ಯ ಬಸವರಾಜ ಧನ್ನೂರ ಮಾತನಾಡಿ, ರೋಟರಿ ಭವನದ ಕನಸು ನನಸಾಗುವ ಹಂತದಲ್ಲಿದೆ. ರೋಟರಿಗಳಿಂದ ರಕ್ತನಿಧಿ ಕೇಂದ್ರ, ಶಾಲೆ, ವೃದ್ಧಾಶ್ರಮ ನಿರ್ಮಾಣ ಮತ್ತಿತರ ಜನೋಪಯೋಗ ಕಾರ್ಯಗಳನ್ನು ಕೈಗೊಳ್ಳುವ ದಿಸೆಯಲ್ಲಿ ಹೆಜ್ಜೆ ಇಡಬೇಕಿದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕೀರ್ತಿ ಟೇಲರ್‍ನ ವಿಜಯಕುಮಾರ, ಟಿಪ್‍ಪಾಟ್ ಡ್ರಾಯ್ ಕ್ಲೀನರ್ಸ್‍ನ ಬಸವರಾಜ ಮಡಿವಾಳ, ಕ್ಷೌರಿಕ ವೃತ್ತಿಯ ವೈಜಿನಾಥ, ಚಮ್ಮಾರ ವೃತ್ತಿಯ ಸೋನಮ್ಮ ಹಾಗೂ ಪತ್ರಿಕಾ ವಿತರಕ ರಾಮಚಂದ್ರ ಕೊಂಡಾ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ, ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.
ಸಿಲ್ವರ್ ಸ್ಟಾರ್ ರೋಟರಿ ಕ್ಲಬ್ ರಚನೆಗೆ ಕಾರಣರಾದ ಬಸವರಾಜ ಧನ್ನೂರ ಹಾಗೂ ಸುವರ್ಣಾ ಧನ್ನೂರ ದಂಪತಿಯನ್ನು ಸನ್ಮಾನಿಸಲಾಯಿತು. ರೋಟರಿ ಫೌಂಡೇಷನ್‍ಗೆ ತಲಾ ರೂ. 25 ಸಾವಿರ ದೇಣಿಗೆ ನೀಡಿದ ಸಂಗಮೇಶ ಆಣದೂರೆ, ಗುಂಡಪ್ಪ ಗೋಧೆ, ಉಲ್ಲಾಸ ಕಟ್ಟಿಮನಿ ಹಾಗೂ ಪಿ. ಸಿದ್ದಪ್ಪ ಅವರನ್ನು ಸತ್ಕರಿಸಲಾಯಿತು.
ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಕ್ಲಬ್ ನೂತನ ಕಾರ್ಯದರ್ಶಿ ಡಾ. ಉಲ್ಲಾಸ್ ಕಟ್ಟಿಮನಿ, ಖಜಾಂಚಿ ಪೊಬ್ಬಾ, ಹಿರಿಯ ಸದಸ್ಯರಾದ ಪ್ರೊ. ಎಸ್.ಬಿ. ಚಿಟ್ಟಾ, ಜಹೀರ್ ಅನ್ವರ್, ಶಿವಕುಮಾರ ಯಲಾಲ್ ಮತ್ತಿತರರು ಇದ್ದರು.