ಸಾಗರ ಖಂಡ್ರೆ ಭವಿಷ್ಯದ ಆಶಾಕಿರಣ – ಗೋ.ರು. ಚನ್ನಬಸಪ್ಪ
ಬೀದರ: ಅತಿ ಚಿಕ್ಕ ವಯಸ್ಸಿನಲ್ಲಿ ನೂತನವಾಗಿ ಸಂಸದರಾಗಿ ಆಯ್ಕೆಯಾದ ಸಾಗರ ಈ. ಖಂಡ್ರೆ ಭವಿಷ್ಯದ ಆಶಾಕಿರಣವಾಗಿದ್ದಾರೆ. ಜನಸೇವೆಗಾಗಿ ಯುವಕರ ಕೈಯಲ್ಲಿ ಅಧಿಕಾರ ನೀಡುವುದು ಅತ್ಯವಶ್ಯಕವಾಗಿದೆ ಎಂದು ಸಂಸ್ಕೃತಿ ಚಿಂತಕ ಗೋ.ರು. ಚನ್ನಬಸಪ್ಪ ತಿಳಿಸಿದರು.
ನಗರದ ಚಿಕ್ಕಪೇಟ್ ಸಮೀಪದ ಹೆಬ್ಬಾಳೆ ಕನವೆನಶನ್ ಹಾಲ್ ನಲ್ಲಿ ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದರು.
ಯುವಶಕ್ತಿ ಅಣುಶಕ್ತಿ ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ಚಿಕ್ಕ ವಯಸ್ಸಿನಲ್ಲಿ ಸಾಗರ ಖಂಡ್ರೆ ಸಂಸತ್ ಪ್ರವೇಶ ಮಾಡಿದ್ದಾರೆ. ಜವಾಬ್ದಾರಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಜನಸೇವೆಗೆ ಅಣಿಗೊಳ್ಳಲಿ. ರಾಜಕೀಯ ನಿಂತ ನೀರಲ್ಲ. ಬದಲಾದ ಸನ್ನಿವೇಶದಲ್ಲಿ ಹಾಗೂ ರಾಜಕೀಯ ಕೆಸರೆರಚಾಟದಲ್ಲಿ ಸಾಗರ ತಲೆಕೊಡದೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಜನಸೇವೆ ಮಾಡಲಿ ಎಂದು ಶುಭ ಹಾರೈಸಿದರು. ಜೊತೆಗೆ ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮಾಲಾ ಬಿ. ನಾರಾಯಣರಾವ, ಅಮೃತರಾವ ಚಿಮಕೊಡೆ, ಡಾ. ಚಂದ್ರಶೇಖರ ಪಾಟೀಲ ಅವರಿಗೂ ನಾಗರಿಕ ಅಭಿನಂದನಾ ಸಮಿತಿ ಗೌರವಿಸಿರುವುದು ಶ್ಲಾಘನೀಯ ಕಾರ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಅರಣ್ಯ, ಜೀವಿಶಾಸ್ತ್ರ, ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ ಜಿಲ್ಲೆಯ ಮಹಾಜನತೆ ಜನಸೇವೆಗಾಗಿ ನಮ್ಮ ಪರಿವಾರದ ಕೈ ಹಿಡಿದಿದ್ದೀರಿ. ಕೊಟ್ಟ ಮಾತಿನಂತೆ ಜನರ ಆಶೋತ್ತರಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಸರ್ಕಾರದಲ್ಲಿ ಅರಣ್ಯ ಸಚಿವ ಸ್ಥಾನ ಸಿಕ್ಕಿದೆ. ಜಿಲ್ಲೆಯನ್ನು ಹಸಿರು ಮನೆಯ ತವರೂರನ್ನಾಗಿ ಮಾಡೋಣ. ಅಧಿಕಾರ ಶಾಶ್ವತವಲ್ಲ. ನಾವು ಮಾಡುವ ಕಾರ್ಯ ಶಾಶ್ವತ. ಹೀಗಾಗಿ ರಾಜ್ಯದಿಂದ, ಕೇಂದ್ರದಿಂದ ಅನುದಾನ ತಂದು ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ ಎಂದರು. ಇಂದು ಸಾಗರ ಖಂಡ್ರೆ ಹಾಗೂ ಉಳಿದ ಸಾಧಕರಿಗೆ ಸನ್ಮಾನ ನೆರವೇರಿಸಿದ್ದಕ್ಕಾಗಿ ನಾಗರಿಕ ಅಭಿನಂದನಾ ಸಮಿತಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಪ್ರಾಸ್ತಾವಿಕ ಮಾತನಾಡಿದ ಸಮಿತಿ ಸಂಯೋಜಕ ಪ್ರೊ. ಜಗನ್ನಾಥ ಹೆಬ್ಬಾಳೆ ಮಾತನಾಡಿ ಖಂಡ್ರೆ ಮನೆತನ ಯಾವಾಗಲೂ ಜನಸೇವೆಯಲ್ಲಿ ತೊಡಗಿಸಿಕೊಂಡಿದೆ. ಅರ್ಧರಾತ್ರಿಗೂ ಜನರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಭೀಮಣ್ಣ ಖಂಡ್ರೆ, ಸಚಿವ ಈಶ್ವರ ಖಂಡ್ರೆ ಮುಂದೆ ಸಂಸದ ಸಾಗರ ಖಂಡ್ರೆ ಬೆಳೆಸಿಕೊಂಡಿದ್ದಾರೆ. ಸಾಧಕರಿಗೆ ಅಭಿನಂದನೆ ಸಲ್ಲಿಸಿ ಗೌರವಿಸುವುದು ನಮ್ಮ ಸಮಿತಿಯ ಕರ್ತವ್ಯ. ಹೀಗಾಗಿ ಅಭಿನಂದನಾರ್ಹರಾಗಿರುವ ಸಾಧಕರಿಂದ ಇನ್ನೂ ಹೆಚ್ಚಿನ ಜನಸೇವೆಯಾಗಲಿ ಎಂದು ಶುಭ ಹಾರೈಸಿದರು. ಅಲ್ಲದೇ ಬೀದರ ಜಹಿರಾಬಾದ ಗಡಿಯಲ್ಲಿ ಸಾಂಸ್ಕೃತಿಕ ಹಬ್ ನಿರ್ಮಿಸಲು ಕೇಂದ್ರದಲ್ಲಿ 50 ಕೋಟಿ ಅನುದಾನವಿದೆ. ಹೀಗಾಗಿ ಜಹಿರಾಬಾದ ಮತ್ತು ಬೀದರ ಸಂಸದರು ಶ್ರಮಿಸಬೇಕೆಂದು ಮನವಿ ಮಾಡಿಕೊಂಡರು.
ಸಂಸದ ಸಾಗರ ಖಂಡ್ರೆ ಮಾತನಾಡಿ ಕ್ಷೇತ್ರದ ಜನತೆ ನನಗೆ ನೀಡಿದ ಗುರುತರ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವೆ. ಶೀಘ್ರದಲ್ಲೇ ವಿಮಾನಯಾನ ಆರಂಭಿಸುವ ಪ್ರಯತ್ನ ನಡೆಯುತ್ತಿದೆ. ನನಗೆ ಅಭಿನಂದನೆ ಸಲ್ಲಿಸಿದ ಸಮಿತಿಯವರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.
ಇದೇ ವೇಳೆ ಪೌರಾಡಳಿತ ಮತ್ತು ಹಜ್ ಸಚಿವ ರಹಿಂಖಾನ್, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೊಡೆ ಮಾತನಾಡಿದರು.
ಭಾಲ್ಕಿ ಹಿರೇಮದ ಪೂಜ್ಯ ಗುರುಬಸವ ಪಟ್ಟದ್ದೆವರು ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಗುರುನಾನಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಬಲಬೀರಸಿಂಗ್ ವಹಿಸಿದ್ದರು. ಜಹಿರಾಬಾದ ಸಂಸದ ಸುರೇಶಕುಮಾರ ಶೆಟಕಾರ ಅವರನ್ನು ವಿಶೇಷ ಸನ್ಮಾನ ನೆರವೇರಿಸಲಾಯಿತು.
ವೇದಿಕೆ ಮೇಲೆ ಬೀದರ ವಿ.ವಿ. ಯ ಕುಲಪತಿ ಪ್ರೊ. ಬಿ.ಎಸ್.ಬಿರಾದಾರ, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಡಾ. ಗುರಮ್ಮಾ ಸಿದ್ದಾರೆಡ್ಡಿ, ಶಶಿಧರ ಕೋಸಂಬೆ, ಅಶೋಕ ಹೆಬ್ಬಾಳೆ, ಬಿ.ಜಿ.ಶೆಟಕಾರ, ಶಿವಶರಣಪ್ಪ ವಾಲಿ, ದಿಗಂಬರ ಮಡಿವಾಳ, ಆನಂದ ದೇವಪ್ಪ, ಬಸವರಾಜ ಧನ್ನೂರ, ಡಾ. ವೈಜಿನಾಥ ಕಮಠಾಣೆ, ಡಾ. ರಾಜಕುಮಾರ ಹೆಬ್ಬಾಳೆ, ಶಾಂತಕುಮಾರ ಪಾಟೀಲ, ಶಿವಶರಣಪ್ಪ ಗಣೇಶಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶಿವಕುಮಾರ ಪಾಂಚಾಳ ನಾಡಗೀತೆ ನಡೆಸಿಕೊಟ್ಟರು. ಸಮಿತಿಯ ಕಾರ್ಯದರ್ಶಿ ಡಾ. ಅಬ್ದುಲ್ ಖದೀರ ಸ್ವಾಗತಿಸಿದರು. ಮಹಾರುದ್ರ ಡಾಕುಳಗೆ, ರೇಣುಕಾ ಮಳ್ಳಿ ನಿರೂಪಿಸಿದರು. ವೈಜಿನಾಥ ಪಾಟೀಲ ವಂದಿಸಿದರು.