ಸರ್ವ ರೋಗಕ್ಕೂ ಯೋಗ ನಿತ್ಯ ಸಂಜೀವಿನಿ – ಡಾ. ಶಿವಕುಮಾರ ಶೆಟಕಾರ
ಬೀದರ: ಸರ್ವರೋಗಗಳಿಗೂ ಯೋಗವೇ ನಿತ್ಯ ಸಂಜೀವಿನಿಯಾಗಿದೆ. ಪ್ರತಿದಿನ ಯೋಗ ಮಾಡಿ ರೋಗದಿಂದ ದೂರ ಉಳಿಯಿರಿ ಎಂದು ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ ತಿಳಿಸಿದರು.
ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬ್ರಿಮ್ಸ್ ಬೋಧಕ ಆಸ್ಪತ್ರೆ ಹಾಗೂ ಬ್ರಿಮ್ಸ್ ಕನ್ನಡ ಸಂಘ ಬೀದರನ ಸಹಯೋಗದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ಮತ್ತು ಪರಿಸರ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗ ಎಂದರೆ ಕೇವಲ ಒಂದು ದಿನ ಮಾಡುವುದಲ್ಲ. ಅದು ನಮ್ಮ ನಿತ್ಯ ಜೀವನದ ಭಾಗವಾಗಬೇಕು. ಕೇವಲ ರೋಗ ಬಂದಾಗ ಯೋಗ ಮಾಡದೆ ಯೋಗವನ್ನು ನಮ್ಮ ಉಸಿರಿನಂತೆ ಪ್ರೀತಿಸಿ ಚೈತನ್ಯದಿಂದ ಬದುಕಬೇಕೆಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ ಮಾತನಾಡಿ ಮನುಷ್ಯನ ಜೀವನ ಸಾರ್ಥಕವಾಗಬೇಕಾದರೆ ಯೋಗ ಧ್ಯಾನ ಮತ್ತು ಆಧ್ಯಾತ್ಮ ಅತ್ಯವಶ್ಯಕವಾಗಿದೆ. ವಿಶ್ವಕ್ಕೆ ಯೋಗದ ಕೊಡುಗೆ ನೀಡಿದ್ದು ಭಾರತ. ಇಂತಹ ಶ್ರೀಮಂತ ಪರಂಪರೆ ಹೊಂದಿದ ದೇಶದಲ್ಲಿ ಮಾನಸಿಕ ಮತ್ತು ದೈಹಿಕ ಸ್ಥಿತಿ ಸುಸ್ಥಿರವಾಗಿಟ್ಟುಕೊಳ್ಳಬೇಕಾದರೆ ಯೋಗ ಮುಖ್ಯ. ಪ್ರತೀ ನಾಲ್ಕು ವ್ಯಕ್ತಿಗಳಲ್ಲಿ ಒಬ್ಬ ಮಾನಸಿಕ ಕಾಯಿಲೆಯಿಂದ ಬಳಲಿದರೆ, ಶೇ. 20 ಪ್ರತಿಶತ ಜನರು ಅಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ. ಹೀಗಾಗಿ ಮಾನಸಿಕ ಸಮತೋಲನಕ್ಕೆ ಯೋಗ ಅವಶ್ಯಕವಾಗಿದೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ. ಶಿವಯೋಗಿ ಬಾಳಿ ಮಾತನಾಡಿ ಮೊಬೈಲ್‍ಗೆ ಸಮಯಕ್ಕೆ ಸರಿಯಾಗಿ ರಕ್ಷಾಕವಚ ಹಾಕಿ ಕಾಪಾಡುತ್ತೇವೆ. ವೈರಸ್ ಬಂದರೆ ರಿಪೇರಿ ಮಾಡಿಸುತ್ತೇವೆ. ಬ್ಯಾಲೆನ್ಸ್ ಮುಗಿದರೆ ರಿಚಾರ್ಜ್ ಮಾಡಿಸುತ್ತೇವೆ. ಹಾಗೆಯೇ ಬಳಲಿ ಬೆಂಡಾದ ಈ ಶರೀರ ಮತ್ತು ಮನಸ್ಸಿಗೆ ರೋಗ ರುಜಿನಗಳೆಂಬ ವೈರಸ್ ಬರಬಾರದೆಂದರೆ ಪ್ರತಿನಿತ್ಯ ಯೋಗ ಮಾಡಿ ಎಂದು ಸಲಹೆ ನೀಡಿದರು.
ಇದೇ ವೇಳೆ ಬ್ರಿಮ್ಸ್ ಆವರಣದಲ್ಲಿ ಸಸಿ ನೆಟ್ಟು ಪರಿಸರ ದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ಉಮಾ ದೇಶಮುಖ, ಡಾ. ಶಾಂತಲಾ ಕೌಜಲಗಿ, ಡಾ. ಪಲ್ಲವಿ ಕೇಸರಿ, ಡಾ. ಆದರ್ಶ, ರಾಜಕುಮಾರ ಮಾಳಗೆ, ಪ್ರಕಾಶ ಮಾಳಗೆ, ಸುಧಾ ಚಂದನ್, ಬ್ರಿಮ್ಸ್ ಕನ್ನಡ ಸಂಘದ ಸಂಯೋಜಕ ಡಾ.ರಾಜಕುಮಾರ ಹೆಬ್ಬಾಳೆ, ಇಮಾನುವೆಲ್ ಕೊಡ್ಡಿಕರ್, ಯೋಗ ಶಿಕ್ಷಕ ವಿಜಯಕುಮಾರ ಶೆರಿಕಾರ ಸೇರಿದಂತೆ ವೈದ್ಯಕೀಯ ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿ ವರ್ಗದವರು, ಹಾಗೂ ಜೈಶ್ರೀರಾಮ ಯೋಗ ಸಮಿತಿಯ ಎಲ್ಲಾ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.