ಸರಕಾರದ ಯೋಜನೆಗಳು ಮನೆಗಳಿಗೆ ತಲುಪಿಸಿ : ಶಿಂಧೆ
ಔರಾದ್ : ಸರಕಾರದ ಯೋಜನೆಗಳು ಸಾಮಾನ್ಯ ಜನರಿಗೆ, ನಿರುದ್ಯೋಗಿ ಯುವಕ ಯುವತಿಯರಿಗೆ, ಬಡವರಿಗೆ, ಅಶಕ್ತರಿಗೆ ದೊರಕಿಸಬೇಕು ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ಹೇಳಿದರು. ಮಂಗಳವಾರ ತಾಲೂಕಿನ ಸಂತಪೂರ, ಶೆಂಬೆಳ್ಳೆ ಗ್ರಾಮ ಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸತ್ಕರಿಸಿ ಮಾತನಾಡಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನ ಕಲ್ಯಾಣಕ್ಕಾಗಿ ಉತ್ತಮ ಯೋಜನೆಗಳನ್ನು ನೀಡಿದೆ. ಈಗಾಗಲೇ ಸರಕಾರದ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳು ಜಾರಿಯಾಗಿವೆ. ಗೃಹಲಕ್ಷ್ಮಿ ಯೋಜನೆ ನೋಂದಣಿ ಕಾರ್ಯನಡೆಯುತ್ತಿದೆ. ಸಧ್ಯದಲ್ಲಿಯೇ ಈ ಯೋಜನೆಯೂ ಜಾರಿಗೆ ಬರಲಿದೆ ಎಂದರು.
ಪ್ರತಿಯೊಂದು ಕುಟುಂಬಕ್ಕೆ ಯೋಜನೆಗಳು ತಲುಪುತ್ತಿವೆ. ಈ ಬಗ್ಗೆ ಇನ್ನೂ ಜಾಗೃತಿ ಮೂಡಿಸಬೇಕು. ಯೋಜನೆಗಳು ಬಡವರಿಗೆ ತಲುಪಿಸುವ ಕಾರ್ಯ ಗ್ರಾಪಂ ಅಧ್ಯಕ್ಷರು-ಉಪಾಧ್ಯಕ್ಷರು ಮತ್ತು ಕಾರ್ಯಕರ್ತರು ಮಾಡಬೇಕಿದೆ ಎಂದರು. ಮುಂಬರುವ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ತಾಲೂಕು, ಜಿಲ್ಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.
ಸರಕಾರದ ಯೋಜನೆಗಳ ಲಾಭ ಪಡೆದ ಫಲಾನುಭವಿಗಳನ್ನು ಗುರುತಿಸಿ ಮತವಾಗಿ ಪರಿವರ್ತಿಸಬೇಕು. ಸಿದ್ದರಾಮಯ್ಯ, ಡಿಕೆ ಶಿವಕುಮಾರ ಅವರು ಎಲ್ಲರೂ ಮುಚ್ಚುವಂತ ಆಡಳಿತ ನೀಡುತ್ತಿದ್ದಾರೆ ಎಂದರು.
ಗ್ರಾಮ ಪಂಚಾಯತಿ ವ್ಯಾಪಿಯಲ್ಲಿ ಜನರು ಮೆಚ್ಚುವಂತೆ ಅಭಿವೃದ್ಧಿಯನ್ನು ನೂತನ ಅಧ್ಯಕ್ಷ-ಉಪಾಧ್ಯಕ್ಷರು ಮಾಡಬೇಕು. ಅದಕ್ಕಾಗಿ ಬೇಕಾದ ಎಲ್ಲ ಸಹಕಾರ ನೀಡುತ್ತೇನೆ. ಗ್ರಾಮಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮಾಜಿ ಜಿಪಂ ಸದಸ್ಯ ರಮೇಶ ದೇವಕತ್ತೆ, ತಾಪಂ ಮಾಜಿ ಉಪಾಧ್ಯಕ್ಷ ನೇಹರು ಪಾಟೀಲ್, ಶರಣಪ್ಪ ಪಾಟೀಲ್, ಚೇತನ ಕಪ್ಪೆಕೇರೆ, ಸಂತಪೂರ ಗ್ರಾಪಂ ಅಧ್ಯಕ್ಷೆ ಮಹಾದೇವಿ ವಿಜಯಕುಮಾರ ಪಾಟೀಲ್, ಉಪಾಧ್ಯಕ್ಷೆ ಸುಮಿತ್ರಾಬಾಯಿ ಮಾರುತಿ ತೇಳೆಕರ್, ಶೆಂಬೆಳ್ಳಿ ಗ್ರಾಪಂ ಅಧ್ಯಕ್ಷ ಬಸಯ್ಯ ಸ್ವಾಮಿ, ಉಪಾಧ್ಯಕ್ಷ ಸುಜಾತಾ ಮಚೆಂದರ್, ಗ್ರಾಪಂಸದಸ್ಯರಾದ ಚಂದ್ರಕಾಂತ ಪಾಟೀಲ್, ಸಂತೋಷ ಹಟಕಾರ್, ಶಿವಕುಮಾರ ಧನ್ನೂರೆ, ದಯಾನಮಧ ಸ್ವಾಮಿ, ಮಹಾದೇವ ಸ್ವಾಮಿ, ಮುಖಂಡ ಶಿವಕುಮಾರ ಚಿದ್ರೆ ಸೇರಿದಂತೆ ಅನೇಕರಿದ್ದರು.