ಸಂಜು ವೆಡ್ಸ್ ಗೀತಾ 2 ಚಿತ್ರದಿಂದ ರಮ್ಯಾ ಔಟ್; ನಾಯಕಿಯಾಗಿ ರಚಿತಾ ರಾಮ್ ಫಿಕ್ಸ್
ಸಂಜು ವೆಡ್ಸ್ ಗೀತಾ 2 ಚಿತ್ರಕ್ಕಾಗಿ ನಿರ್ದೇಶಕ ನಾಗಶೇಖರ್ ಮತ್ತು ರಚಿತಾ ರಾಮ್ ಮಾತುಕತೆ ನಡೆಸುತ್ತಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು ಮತ್ತು ಇದೀಗ ಆ ಸುದ್ದಿ ನಿಜವಾಗಿದೆ. ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿಯೊಂದಿಗೆ ರಚಿತಾ ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ.
‘ನಾನು ಈ ಪಾತ್ರಕ್ಕೆ ನಟಿಯರನ್ನು ಪರಿಗಣಿಸುವಾಗ, ನನ್ನ ಮನಸ್ಸಿನಲ್ಲಿ ಮೂವರ ಹೆಸರುಗಳು ಇದ್ದವು ಮತ್ತು ರಚಿತಾ ರಾಮ್ ಖಂಡಿತವಾಗಿಯೂ ಅವರಲ್ಲಿ ಒಬ್ಬರಾಗಿದ್ದರು. ರಚಿತಾ ಅವರ ಹಿಂದಿನ ಸಿನಿಮಾಗಳಲ್ಲಿನ ಅಭಿನಯವು ಅವರನ್ನು ಪಾತ್ರಕ್ಕೆ ಆಯ್ಕೆ ಮಾಡುವ ವಿಶ್ವಾಸವನ್ನು ನೀಡಿತು. ರಚಿತಾ ಅವರು ಸ್ಕ್ರಿಪ್ಟ್ ಕೇಳಿ ಇಷ್ಟಪಟ್ಟರು ಮತ್ತು ಅವರ ಪಾತ್ರವನ್ನು ಮೆಚ್ಚಿಕೊಂಡರು. ನಂತರ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡರು’ ಎಂದು ನಾಗಶೇಖರ್ ಹಂಚಿಕೊಂಡಿದ್ದಾರೆ.
ಕುತೂಹಲಕಾರಿ ವಿಚಾರವೆಂದರೆ, ದುನಿಯಾ ವಿಜಯ್ ನಟನೆಯ ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಸಿನಿಮಾದಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು. ಅದರ ಸೀಕ್ವೆಲ್ ‘ಜಾನಿ ಜಾನಿ ಯೆಸ್ ಪಾಪ’ ಸಿನಿಮಾದಲ್ಲಿ ವಿಜಯ್ ಜೊತೆ ನಟಿ ರಚಿತಾ ನಟಿಸಿದ್ದಾರೆ. ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ. ಅದೇ ರೀತಿ ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ ಚಿತ್ರದ ಎರಡನೇ ಅಧ್ಯಾಯದಲ್ಲಿ ರಮ್ಯಾ ಬದಲಿಗೆ ರಚಿತಾಗೆ ಅದೃಷ್ಟ ಒಲಿದು ಬಂದಿದೆ.
ನಿರ್ದೇಶಕರು ಆಗಸ್ಟ್ 15 ರಂದು ಅಧಿಕೃತವಾಗಿ ತಮ್ಮ ಚಿತ್ರವನ್ನು ಪ್ರಾರಂಭಿಸಲು ಯೋಜಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ನಟಿಸಲು ಪ್ರಕಾಶ್ ರಾಜ್ ಮತ್ತು ರಮ್ಯಾ ಕೃಷ್ಣನ್ ಅವರನ್ನು ಸಂಪರ್ಕಿಸಲು ಮತ್ತು ವಿಶೇಷ ಪಾತ್ರದಲ್ಲಿ ತಮನ್ನಾ ಭಾಟಿಯಾ ಅವರನ್ನು ಕರೆತರಲು ನಿರ್ದೇಶಕರು ಯೋಜಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
‘ನಾನು ಈ ಹಿಂದೆ ನನ್ನ ಚೊಚ್ಚಲ ತೆಲುಗು ಸಿನಿಮಾವಾದ ‘ಗುರ್ತುಂದಾ ಸೀತಾಕಾಲಂ’ ತಮನ್ನಾ ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರು ಈಗ ಸಂಜು ವೆಡ್ಸ್ ಗೀತಾ 2 ಸಿನಿಮಾದ ಭಾಗವಾಗಬೇಕೆಂದು ಭಯಸುತ್ತೇನೆ. ಶೀಘ್ರದಲ್ಲೇ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸುತ್ತೇನೆ’ ಎನ್ನುತ್ತಾರೆ ನಾಗಶೇಖರ್.
ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಅವರ ಛಾಯಾಗ್ರಹಣ ಮತ್ತು ಸತ್ಯ ಹೆಗಡೆ ಅವರ ಸಂಗೀತವಿದೆ.