ಶಾಸಕ ಪ್ರಭು ಚವ್ಹಾಣ ಗ್ರಾಮ ಸಂಚಾರ: 9.5 ಕೋಟಿಯ ಕಾಮಗಾರಿಗಳಿಗೆ ಚಾಲನೆ
ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಶುಕ್ರವಾರ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಂಚರಿಸಿ 9.5 ಕೋಟಿ ಮೊತ್ತದ ಜಲ ಜೀವನ ಮಿಷನ್ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಮುತಖೇಡ್ ನಲ್ಲಿ 1.70 ಕೋಟಿ, ಕಿಶನ್ ನಾಯಕ್ ತಾಂಡಾದಲ್ಲಿ 30.46 ಲಕ್ಷ, ಗಂಗನಬೀಡ್ ನಲ್ಲಿ 1.07 ಕೋಟಿ, ವಸುರಾಮ ನಾಯಕ್ ತಾಂಡಾದಲ್ಲಿ 28.4 ಲಕ್ಷ, ಗಣೇಶಪೂರ(ಯು)ನಲ್ಲಿ 1.34 ಕೋಟಿ, ರಾಂಪೂರನಲ್ಲಿ 81.82 ಲಕ್ಷ, ಡಿಗ್ಗಿಯಲ್ಲಿ 1.31 ಕೋಟಿ, ಅಶೋಕನಗರನಲ್ಲಿ 33.91 ಲಕ್ಷ, ಸಂಗಮನಲ್ಲಿ 94.49 ಲಕ್ಷ ಹಾಗೂ ಚಾಂಡೇಶ್ವರನಲ್ಲಿ 1.41 ಕೋಟಿ ಮೊತ್ತದ ಕುಡಿಯುವ ನೀರಿನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಸಿಗಬೇಕೆಂಬ ಉದ್ದೇಶದಿಂದ ಪ್ರಧಾನಿಯವರು ಜಲ ಜೀವನ ಮಿಷನ್ ಯೋಜನೆಯನ್ನು ದೇಶಾದ್ಯಂತ ಆರಂಭಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಉತ್ತಮ ಯೋಜನೆ ಇದಾಗಿದ್ದು, ಕೆಲಸ ಸರಿಯಾಗಿ ಮಾಡಬೇಕೆಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಅಧಿಕಾರಿಗಳು ಸಾಕಷ್ಟು ಮುತುವರ್ಜಿಯಿಂದ ಕೆಲಸ ಮಾಡಬೇಕು. ಕೆಲಸ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಎಲ್ಲ ಕಡೆಗಳಲ್ಲಿ ಕಾಮಗಾರಿ ಗುಣಮಟ್ಟದಿಂದ ನಡೆಯುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಯಾವುದೇ ಕೆಲಸ ಯಶಸ್ವಿಯಾಗಿ ನಡೆಯಬೇಕೆಂದರೆ ಗ್ರಾಮಸ್ಥರ ಸಹಕಾರ ಅತ್ಯವಶ್ಯಕವಾಗಿರುತ್ತದೆ. ಗ್ರಾಮಸ್ತರು ತಮ್ಮ ಊರುಗಳಲ್ಲಿ ನಡೆಯುವ ಕೆಲಸದ ಮೇಲೆ ನಿಗಾ ವಹಿಸಬೇಕು. ಎಲ್ಲಿಯಾದರೂ ಲೋಪಗಳು ಕಾಣಿಸಿದಲ್ಲಿ ತಕ್ಷಣ ಅಧಿಕಾರಿಗಳು ಅಥವಾ ತಮ್ಮನ್ನು ಸಂಪರ್ಕಿಸಬೇಕು. ಕೆಲಸ ಉತ್ತಮ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ಕಾಮಗಾರಿ ತೃಪ್ತಿಕರ ಇಲ್ಲವಾದರೆ ಯಾವುದೇ ಕಾರಣಕ್ಕೂ ಹ್ಯಾಂಡೋವರ್ ಮಾಡಿಕೊಳ್ಳಬಾರದು ಎಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಕಾಮಗಾರಿಯಲ್ಲಿ ಲೋಪ ಕಾಣಿಸಿದರೆ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ಸಾಂತ್ವನ: ರಾಂಪೂರ ಗ್ರಾಮದಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ಮರಣ ಹೊಂದಿದ ಸಂಗಮ್ಮ ವೀರಭದ್ರ ಸಾಂಗವೆ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಕಮಲನಗರ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ ಘಾಟೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಡಿ.ಸುಭಾಷ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಪ್ರವೀಣ ಕಾರಬಾರಿ, ಬಾಳಾಸಾಹೇಬ್ ಪಾಟೀಲ್, ಭರತ್ ಕದಮ್, ಶಿವಕುಮಾರ ಜುಲ್ಫೆ, ಬಾಲಾಜಿ ತೆಲಂಗ್, ರವಿ ಬಿರಾದಾರ, ಶಕುಂತಲಾ ಮುತ್ತಂಗೆ, ಹಣಮಂತ ದಾನಾ, ದೇವದಾಸ ಪವಾರ್, ಯೋಗೇಶ ಪಾಟೀಲ್, ಸಚಿನ ರಾಠೋಡ್, ಬಾಬು ಗುರೂಜಿ, ಸಂಜುಕುಮಾರ ಮುರ್ಕೆ, ಉದಯ ಸೋಲಪೂರೆ, ಭೀಮರಾವ ಪಟವಾರಿ ಹಾಗೂ ಇತರರು ಉಪಸ್ಥಿತರಿದ್ದರು.