ಶಾಸಕ ಪ್ರಭು ಚವ್ಹಾಣರಿಂದ ಮಳೆ ಹಾನಿ ಪರಿಶೀಲನೆ
ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಸಂಚರಿಸಿ ಮಳೆಯಿಂದಾಗಿರುವ ಹಾನಿ ವೀಕ್ಷಿಸಿದರು.
ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳ ತಂಡದೊಂದಿಗೆ ದಾಬಕಾ(ಸಿ), ಭಂಡಾರಕುಮಟಾ, ಚಿಮ್ಮೇಗಾಂವ, ಮದನೂರ, ಕಮಲನಗರ, ಹೊಳಸಮುದ್ರ, ಮುಧೋಳ(ಬಿ), ಹೆಡಗಾಪೂರ, ಸಂತಪೂರ, ಶೆಂಬೆಳ್ಳಿ, ವಡಗಾಂವ, ಚಿಂತಾಕಿ, ಯನಗುಂದಾ, ಕೊಳ್ಳೂರ, ಬೋರಾಳ, ಔರಾದ(ಬಾ) ಸೇರಿದಂತೆ ಹಲವೆಡೆ ಸಂಚರಿಸಿ ಮನೆ ಹಾನಿ ಮತ್ತು ಬೆಳೆ ಹಾನಿಯ ಬಗ್ಗೆ ಮಾಹಿತಿ ಪಡೆದರು.
ಭಂಡಾರ ಕುಮಟಾ, ಹೆಡಗಾಪೂರ ಹಾಗೂ ಮತ್ತಿತರೆ ಗ್ರಾಮಗಳಲ್ಲಿ ಮಳೆಯಿಂದಾಗಿ ಶಿಥಿಲಗೊಂಡ ಮನೆಗಳಿಗೆ ಭೇಟಿ ನೀಡಿದರು. ತೀವ್ರ ಮಳೆಯಿಂದ ಕ್ಷೇತ್ರದ ಅನೇಕ ಕಡೆಗಳಲ್ಲಿ ಮನೆಗಳು ಕುಸಿದಿವೆ. ಕಂದಾಯ ಇಲಾಖೆ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ತಿಳಿಸಿದರು.
ಬೆಳೆ ಹಾನಿಯ ಕುರಿತು ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು. ಅಗತ್ಯ ಪರಿಹಾರ ಕಲ್ಪಿಸುವ ದಿಶೆಯಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವುದೆಂದು ತಿಳಿಸಿದರು.
ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯ ಬಗ್ಗೆ ಶಾಸಕರ ಗಮನಕ್ಕೆ ತಂದಾಗ, ನಿರಂತರ ಸುರಿದ ಮಳೆಯಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಉರುಳಿವೆ, ಇನ್ನೂ ಕೆಲವೆಡೆ ತಂತಿಗಳು ಕಡಿತಗೊಂಡಿವೆ. ತಕ್ಷಣ ಸರಿಪಡಿಸಿ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕೆಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಮದನೂರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಗ್ರಾಮದ ಪ್ರಮುಖ ರಸ್ತೆ ಕೆಸರಿನಿಂದ ಆವರಿಸಿ ಸಾರ್ವಜನಿಕರ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯ ಮುಖಂಡರು ಶಾಸಕರಿಗೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಸಂಬಂಧಿಸಿದ ಗುತ್ತಿಗೆದಾರರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಬೇಕೆಂದು ಸೂಚಿಸಿದರು. ಹಾಗೆಯೇ ಅಧಿಕಾರಿಗಳು ಕೂಡ ಮುತುವರ್ಜಿಯಿಂದ ಕೆಲಸ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಲ್ಲಿಕಾರ್ಜುನ, ನಾಗರಾಜ ನಾಯಕ್, ಕಮಲನಗರ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ ಘಾಟೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಧೂಳಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸುಭಾಷ, ಲೋಕೋಪಯೋಗಿ ಇಲಾಖೆಯ ವೀರಶೆಟ್ಟಿ ರಾಠೋಡ್, ಜೆಸ್ಕಾಂನ ರವಿ ಕಾರಬಾರಿ, ಮುಖಂಡರಾದ ವಸಂತ ಬಿರಾದಾರ, ಸೂರೇಶ ಭೋಸ್ಲೆ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಶಿವಾಜಿರಾವ ಪಾಟೀಲ ಮುಂಗನಾಳ, ಸಚಿನ ರಾಠೋಡ್, ಯೋಗೇಶ ಪಾಟೀಲ, ಪ್ರವೀಣ ಕಾರಬಾರಿ, ಕೇರಬಾ ಪವಾರ, ಅಮೃತರಾವ ವಟಗೆ, ಧನರಾಜ ಗುಡ್ಡಾ, ಅಶೋಕ ಮೇತ್ರೆ, ಧೊಂಡಿಬಾ ನರೋಟೆ, ಶರಣಪ್ಪ ಪಂಚಾಕ್ಷರಿ ಸೇರಿದಂತೆ ಇತರರಿದ್ದರು.