ಬೀದರ್

ಶಾಸಕ ಪ್ರಭು ಚವ್ಹಾಣರಿಂದ ಮನೆಹಾನಿ ಸಂತ್ರಸ್ಥರಿಗೆ ತಿಳುವಳಿಕೆ ಪತ್ರ ವಿತರಣೆ

2023-24ನೇ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮನೆಹಾನಿಯಾದ ಸಂತ್ರಸ್ಥರಿಗೆ ಸರ್ಕಾರದಿಂದ ಪರಿಹಾರ ಬಿಡುಗಡೆಯಾಗಿದ್ದು, ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಆಗಸ್ಟ್ 28ರಂದು ಔರಾದ(ಬಿ) ತಾಲ್ಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಔರಾದ(ಬಿ) ಕ್ಷೇತ್ರದ ಫಲಾನುಭವಿಗಳಿಗೆ ತಿಳುವಳಿಕೆ ಪತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಳೆಗಾಲದ ಆರಂಭದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕ್ಷೇತ್ರದಲ್ಲಿ ಸಾಕಷ್ಟು ಮನೆಗಳು ಹಾನಿಗೊಂಡಿವೆ. ಸರ್ಕಾರದ ಮೇಲೆ ಒತ್ತಡ ತಂದು ಸಂತ್ರಸ್ಥರಿಗೆ ಪರಿಹಾರಧನ ಬಿಡುಗಡೆ ಮಾಡಲಾಗಿದೆ. ಔರಾದ(ಬಿ) ತಾಲ್ಲೂಕಿನ 104 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದ್ದು, ಕಮಲನಗರ ಹಾಗೂ ಉಳಿದ ಫಲಾನುಭವಿಗಳಿಗೆ ಶೀಘ್ರದಲ್ಲೇ ಪರಿಹಾರಧನ ಬಿಡುಗಡೆಯಾಗಲಿದೆ ಎಂದರು.

ತೀವ್ರ ಮಳೆಯಾದ ಸಂದರ್ಭದಲ್ಲಿ ನಾನು ಕ್ಷೇತ್ರದೆಲ್ಲೆಡೆ ಸುತ್ತಾಡಿ ವಾಸ್ತವವನ್ನು ಕಣ್ಣಾರೆ ವೀಕ್ಷಿಸಿ, ಮನೆ ಹಾನಿಯ ನಿಖರ ವರದಿ ಸಲ್ಲಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೆ. ತಹಸೀಲ್ದಾರರು ಸೇರಿದಂತೆ ಎಲ್ಲ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಶೀಘ್ರ ಪರಿಹಾರ ಬಿಡುಗಡೆಯಾಗಿದೆ. ಪ್ರತಿ ಫಲಾನುಭವಿಗಳ ಖಾತೆಗೆ 50 ಸಾವಿರ ಮಂಜೂರಾಗಿದ್ದು, ಇದನ್ನು ದುರುಪಯೋಗ ಮಾಡದೇ ಹಾನಿಯಾದ ಮನೆಯ ದುರಸ್ಥಿಗೆ ಬಳಸಿಕೊಳ್ಳಬೇಕೆಂದು ತಿಳಿಸಿದ್ದಾರೆ. ಹಾಗೆಯೇ ದುರಸ್ತಿ ಮಾಡಿದ ಮನೆಗಳ ಖಚಿತತೆಯ ಬಗ್ಗೆ ಭಾವಚಿತ್ರಗಳನ್ನು ಸಲ್ಲಿಸುವಂತೆ ಹೇಳಿದ್ದಾರೆ.

ಮಹಾಜನತೆ ನನ್ನನ್ನು ನಾಲ್ಕನೇ ಬಾರಿಗೆ ಶಾಸಕರನ್ನಾಗಿ ಆಯ್ಕೆ ಮಾಡಿದ್ದು, ಅವರ ನಿರೀಕ್ಷೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕಷ್ಟವಿರಲಿ, ಸುಖವಿರಲಿ ನಾನು ಸದಾ ಜನರ ಜೊತೆಗಿದ್ದೇನೆ. ಏನೆ ಸಮಸ್ಯೆ ಬರಲಿ ನನ್ನನ್ನು ನೇರವಾಗಿ ಸಂಪರ್ಕಿಸಬಹುದೆAದು ಶಾಸಕರು ತಿಳಿಸಿದರು.
ಸಮರ್ಪಕ ಮಳೆಯಾಗದ ಕಾರಣ ಔರಾದ(ಬಿ) ಕ್ಷೇತ್ರದಲ್ಲಿ ಸಾಕಷ್ಟು ಬೆಳೆನಷ್ಟವಾಗಿದೆ. ಕಂದಾಯ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ನೊಂದ ರೈತರಿಗೆ ಸರ್ಕಾರದ ಪರಿಹಾರಧನ ಸಿಗುವ ನಿಟ್ಟಿನಲ್ಲಿ ಪ್ರಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಇದೇ ವೇಳೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಔರಾದ(ಬಿ) ಎಪಿಎಂಸಿ ಅಧ್ಯಕ್ಷರಾದ ದೊಂಡಿಬಾ ನರೋಟೆ, ಔರಾದ(ಬಿ) ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಸುರೇಶ ಕೋಟೆ, ಗ್ರೇಡ್-2 ತಹಸೀಲ್ದಾರ ನರಸಪ್ಪ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಬರಪೀಡಿತ ಪ್ರದೇಶಗಳೆಂದು ಘೋಷಿಸಲು ಒತ್ತಾಯ: ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿರುವುದರಿಂದ ಸಾಕಷ್ಟು ಬೆಳೆನಷ್ಟವಾಗಿದೆ. ರೈತರು ಆತಂಕದಲ್ಲಿದ್ದು, ಸರ್ಕಾರ ಕೂಡಲೇ ಬಡಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಶಾಸಕರು ಮುಖ್ಯಮಂತ್ರಿಯವರಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಕಂದಾಯ ಇಲಾಖೆ ಸಚಿವರಾದ ಕೃಷ್ಣಭೈರೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಶಾಸಕರು, ಔರಾದ(ಬಿ) ಕ್ಷೇತ್ರದಲ್ಲಿ ಮುಂಗಾರು ಹಂಗಾಮಿನ ಆರಂಭದಲ್ಲಿ ಒಂದು ತಿಂಗಳು ಮಳೆಯಾಗದಿರುವುದರಿಂದ ಬಿತ್ತನೆಯೂ ವಿಳಂಬವಾಗಿತ್ತು. ನಂತರ ತೀವ್ರ ಮಳೆಯಾಗಿದೆ. ಕಳೆದೊಂದು ತಿಂಗಳಿನಿAದ ಮಳೆಯಾಗದಿರುವುದರಿಂದ ಸದ್ಯ ಬಿತ್ತನೆಯಾದ ಬೆಳೆಗಳೆಲ್ಲ ಸೊರಗಿ ನಿಂತಿವೆ ಎಂದಿದ್ದಾರೆ.

ಮಳೆಯ ಸಮಸ್ಯೆಯಿಂದಾಗಿ ಎರಡ್ಮೂರು ಬಾರಿ ಬಿತ್ತನೆ ಮಾಡಿ ನಷ್ಟ ಅನುಭವಿಸಿರುವ ಕ್ಷೇತ್ರದ ರೈತರು ಇದೀಗ ಮಳೆಯ ಆಭಾವದಿಂದ ಚಿಂತಿತರಾಗಿದ್ದಾರೆ. ಔರಾದ್‌ನಲ್ಲಿ ಬಹುತೇಕ ರೈತರು ಮಳೆಯನ್ನು ಆಶ್ರಯಿಸಿರುವುದರಿಂದ ಸಮರ್ಪಕ ಮಳೆಯಾದರೆ ಮಾತ್ರ ಫಸಲು ಸಿಗಬಹುದು. ಈ ಬಾರಿಯಾದರೂ ಉತ್ತಮ ಬಳೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಕ್ಷೇತ್ರದ ರೈತರು ತೀವ್ರ ನಿರಾಶರಾಗಿದ್ದಾರೆ. ತೀವ್ರ ಬಿಸಿಲಿನ ತಾಪಕ್ಕೆ ಹೊಲಗಳಲ್ಲಿನ ಬೆಳೆಗಳೆಲ್ಲವೂ ಸುಟ್ಟು ಹೋಗುತ್ತಿರುವುದರಿಂದ ಅನ್ನದಾತರು ದಿಕ್ಕು ತೋಚದೆ ಪರಿತಪಿಸುತ್ತಿದ್ದಾರೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ತೀವ್ರ ಬೆಳೆನಷ್ಟ ಹೊಂದಿದ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ ಅವಶ್ಯಕ ಬೆಳೆನಷ್ಟ ಪರಿಹಾರ ಬಿಡುಗಡೆ ಮಾಡಬೇಕೆಂದು ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Ghantepatrike kannada daily news Paper

Leave a Reply

error: Content is protected !!