ವ್ಯಾಪಾರೀಕರಣವಾದ ಶಿಕ್ಷಣ, ಪಾಲಕರಿಗೆ ಶುಲ್ಕದ ಹೆಸರಿನಲ್ಲಿ ಸುಲಿಗೆ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಬೀದರ, ಆ. 11ಃ ಬೀದರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ನಾಯಿಕೊಡುಗಳಂತೆ ತಲೆ ಎತ್ತಿರುವ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಂಡಿದ್ದು, ಪಾಲಕರಿಗೆ ಶಾಲಾ ಪ್ರವೇಶಾತಿ ಡೋನೆಷನ್ ಹಾಗೂ ಶಾಲಾ ಶುಲ್ಕದ ಹೆಸರಿನಲ್ಲಿ ಪಾಲಕರನ್ನು ಸುಲಿಗೆ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರು ಪ್ರಾಥಮಿಕ ಶಿಕ್ಷಣ ಸಚಿವರಿಗೆ ಬರೆದ ಮನವಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಪಾಲಕರು ತಮ್ಮ ತಮ್ಮ ಮಕ್ಕಳಿಗೆ ಖಾಸಗಿ, ಅನುದಾನಿತ ಶಾಲೆಗಳಲ್ಲಿ ಸಾವಿರಾರು ರೂಪಾಯಿ ಡೋನೆಷನ್ ಕೊಟ್ಟು ಪ್ರವೇಶಾತಿ ಕೊಡಿಸಿದ್ದಾರೆ. ಈಗ ಪಾಲಕರು ಮಕ್ಕಳಿಗೆ ಶಾಲಾ ಶುಲ್ಕ ಕಟ್ಟಲು ಸಾಧ್ಯವಾಗದೇ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸ-ಕಾರ್ಯ ಇಲ್ಲದೇ ತೀವ್ರ ಸಂಕಷ್ಟ ಅನುಭವಿಸಿದ್ದ ಪಾಲಕರು ಮಕ್ಕಳ ಶುಲ್ಕ ಕಟ್ಟಲು ಆಗದೇ ಬಹಳ ತೊಂದರೆ ಅನುಭವಿಸಿದ್ದಾರೆ. ಲಾಕ್‌ಡೌನ್‌ದಿಂದ ಸ್ವಲ್ಪ ಸುಧಾರಿಸಿಕೊಂಡಿರುವ ಪಾಲಕರು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಶುಲ್ಕ ಕಟ್ಟಲು ನೀಡುತ್ತಿರುವ ಕಿರುಕುಳದಿಂದ ಪರೇಶಾನ ಆಗಿದ್ದಾರೆ. ಅಲ್ಲದೇ ಮಕ್ಕಳ ಪಾಲಕರು ಈಗ ಬೀದಿಯಲ್ಲಿ ಮೆಕ್ಕೆತೆನೆ, ಶೇಂಗಾ ಮಾರಾಟ ಮಾಡಿ, ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿ, ಮಕ್ಕಳ ಶುಲ್ಕ ಭರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಆಟೋ ರೀಕ್ಷಾ ನಡೆಸುವ ಡ್ರೇವರಗಳು ಮಕ್ಕಳ ಶುಲ್ಕ ಕಟ್ಟಲು ಸಾಧ್ಯವಾಗದೇ ಕುಟುಂಬ ನಿರ್ವಹಣೆ ಮಾಡಲು ಕಷ್ಟಪಡುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಶಾಲಾ-ಕಾಲೇಜಿನ ಪ್ರವೇಶಾತಿ ಪಡೆಯಲು ಸಾವಿರಾರು ರೂಪಾಯಿ ಡೋನೆಷನ್ ಕೊಟ್ಟಿರುವ ಪಾಲಕರು ಈಗ ತಿಂಗಳ ಶುಲ್ಕ ಕಟ್ಟಲು ಪರದಾಡುವಂತಾಗಿದೆ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನಿಯಮ ಮೀರಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಪಾಲಕರಿಂದ ಅಧಿಕ ಶುಲ್ಕ ಪಡೆದು ಪಾಲಕರಿಗೆ ವಂಚನೆ ಮಾಡುತ್ತಿವೆ. ರಾಜ್ಯ ಸರ್ಕಾರ ಆಯಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ ನೆತೃತ್ವದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಂಘ-ಸAಸ್ಥೆಗಳ ಪ್ರತಿನಿಧಿಗಳು ಮತ್ತು ಜನಪ್ರತಿನಿಧಿಗಳ ಒಳಗೊಂಡ ಸಮಿತಿ ರಚನೆ ಮಾಡಿ, ಶಾಲಾ-ಕಾಲೇಜಿನ ಶುಲ್ಕದ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಕೋರಿದ್ದಾರೆ.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಎಸ್.ಎಫ್.ಐ ಮತ್ತು ದಲಿತ ವಿದ್ಯಾರ್ಥಿ ಸಂಘಟನೆಗಳು ಅಧಿಕ ಶುಲ್ಕ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಹೋರಾಟ ಮಾಡದೇ ಇರುವುದು ತೀವ್ರ ಕಳವಳಕಾರಿಯಾಗಿದೆ ಎಂದು ತಿಳಿಸಿದ್ದಾರೆ.