`ವುಶು’ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನದ ಪದಕ
ಬೀದರ್: ಇಲ್ಲಿನ ಡಿಸಿಸಿ ಬ್ಯಾಂಕ್ ಸಂಚಾಲಿತ ಶಾರದಾ ಆರ್‍ಸೆಟಿ ನಿರ್ದೇಶಕ ಬಿ. ಶಿವಪ್ರಸಾದ್ ಅವರ ಸೊಸೆ ಮತ್ತು ಮೊಮ್ಮಗ ಈಚೆಗೆ ಮಲೇಷಿಯಾದಲ್ಲಿ ನಡೆದ ವುಶು ಅಂತರರಾಷ್ಟ್ರೀಯ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಶಿವಪ್ರಸಾದ್ ಅವರ ಪುತ್ರ ಕೀರ್ತಿ ಬಿ.ಎಸ್. ಪ್ರಸಾದ್ ಅವರು ಅಂತರರಾಷ್ಟ್ರೀಯ ಖ್ಯಾತಿಯ ವುಶು ಸ್ಪೋಟ್ರ್ಸ್ ತರಬೇತುದಾರರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ಎಂ.ಎಂ.ಎ. ವುಶು ಸ್ಪೋಟ್ರ್ಸ್ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಕೀರ್ತಿ ಪ್ರಸಾದ್ ನೇತೃತ್ವದ ತಂಡವು ಮಲೇಷಿಯಾ ವುಶು ಚಾಂಪಿಯನ್‍ಶಿಪ್‍ನಲ್ಲಿ ಒಟ್ಟು 17 ಪದಕ ಗೆದ್ದುಕೊಂಡಿದೆ. ಕೀರ್ತಿ ಪ್ರಸಾದ್ ಅವರ ಪುತ್ರ, ಒಂಬತ್ತು ವರ್ಷದ ಉತ್ಕರ್ಷ್ 2 ಬೆಳ್ಳಿ ಪದಕ ಗೆದ್ದಿದ್ದಾರೆ. ಪತ್ನಿ ಕುಸುಮಾ ಅವರು 2 ಚಿನ್ನದ ಪದಕ ಗೆದ್ದಿದ್ದಾರೆ ಎಂದು ಬಿ. ಶಿವಪ್ರಸಾದ್ ತಿಳಿಸಿದ್ದಾರೆ.
ಚಾಂಪಿಯನ್‍ಶಿಪ್‍ನಲ್ಲಿ ಏಷ್ಯಾದ ವಿವಿಧ ರಾಷ್ಟ್ರಗಳ 500 ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಕೀರ್ತಿ ಪ್ರಸಾದ್ ನೇತೃತ್ವದ ಬೆಂಗಳೂರು ತಂಡದ ಖುಷಿ 2 ಚಿನ್ನದ ಪದಕ, ಉತ್ಕರ್ಷ್ 2 ಬೆಳ್ಳಿ ಪದಕ, ವಿಶಾಲ ಒಂದು ಕಂಚು, ಮತ್ತೊಂದು ಬೆಳ್ಳಿ ಪದಕ, ಧೀರಜ್ ಎರಡು ಕಂಚಿನ ಪದಕ, ಜಹೀರ್ ಎರಡು ಚಿನ್ನದ ಪದಕ, ಸಮನ್ವಿತಾ 2 ಕಂಚು, ಧನುಷ್ ಎರಡು ಕಂಚಿನ ಪದಕ ಪಡೆದಿದ್ದಾರೆ. ಧ್ವನಿ, ಭೂಮಿಕಾ, ಆಶಾಜ್ ಅವರೂ ಪದಕ ಪಡೆದಿದ್ದಾರೆ.
ಪುರಾತನ ಮಾರ್ಷಲ್ ಆರ್ಟ್ ಆಗಿರುವ `ವುಶು’ ಅನ್ನು ಜನಪ್ರಿಯಗೊಳಿಸಲು ಬಿ. ಶಿವಪ್ರಸಾದ್ ಅವರ ಪುತ್ರ ಕೀರ್ತಿ ಪ್ರಸಾದ್, ಸೊಸೆ ಕುಸುಮಾ ಮತ್ತು ಪರಿವಾರದವರು ಶ್ರಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ತರಬೇತಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.