ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗದಂತೆ ಎಚ್ಚರವಹಿಸಿ : ಡಿಡಿಪಿಯು ಶಾಹಾಬಾದಕರ್
ಬೀದರ್:2023ರ ಆಗಷ್ಟ 21 ರಿಂದ ನಡೆಯುವ ದ್ವಿತೀಯ ಪಿಯುಸಿ 2ನೇ ಪೂರಕ ಪರೀಕ್ಷೆಗೆ ಈ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ 2ನೇ ಪೂರಕ ಪರೀಕ್ಷೆಯಿಂದ ವಂಚಿತರಾಗದಂತೆ ಎಚ್ಚರವಹಿಸಬೇಕು ಎಂದು ಬೀದರನ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್ ಸಲಹೆ ನೀಡಿದರು.
ಬೀದರನ ಜ್ಞಾನಸುಧಾ ಪಿಯು ಕಾಲೇಜಿನಲ್ಲಿ ಕರೆದ ಜಿಲ್ಲಾ ಪ್ರಾಂಶುಪಾಲರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
2022-23ನೇ ಸಾಲಿನಲ್ಲಿ ಅನುತ್ತೀರ್ಣರಾದ ಮತ್ತು ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವೈಯಕ್ತಿಕ ಕಾಳಜಿ ವಹಿಸಬೇಕು.
ಮಾರ್ಚ್ 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹಾಗೂ ಮೇ 2023ರ ಪೂರಕ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಫಲಿತಾಂಶ ಪಟ್ಟಿಯ ಆಧಾರದ ಮೇಲೆ ಮತ್ತು 2023ನೇ ಸಾಲಿಗಿಂತ ಹಿಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಮೂಲ ಅನುತ್ತೀರ್ಣ ಅಂಕಪಟ್ಟಿಗಳ ಆಧಾರದ ಮೇಲೆ 2ನೇ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು.
ಪರೀಕ್ಷೆ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳ ಮಾಹಿತಿಯನ್ನು ಆಯಾ ದಿನದಂದು ಕಾಲೇಜಿನ ಪರೀಕ್ಷೆ ಪೋರ್mಲ್‍ನಲ್ಲಿ ಇಂದೀಕರಿಸಬೇಕು.ಸಂಬಂಧಿಸಿದ ಪಿಯು ಕಾಲೇಜುಗಳಲ್ಲಿ ಪರೀಕ್ಷೆ ಶುಲ್ಕ ಪಾವತಿಸಲು ಆಗಷ್ಟ 10 ಕಡೆಯ ದಿನಾಂಕವಾಗಿರುತ್ತದೆ.ಮಕ್ಕಳಿಗೆ ಬೊಧನೆಯಲ್ಲಿ ತೊಡಕಾಗಬಾರದು ಎನ್ನುವ ಸದುದ್ದೇಶದಿಂದ ಆಗಷ್ಟ 21 ರಿಂದ ದ್ವಿತೀಯ ಪಿಯುಸಿ 2ನೇ ಪೂರಕ ಪರೀಕ್ಷೆಗಳು ಮದ್ಯಾಹ್ನದ ಅವಧಿಗೆ (2.15 ರಿಂದ 5.30) ನಡೆಯುತ್ತಿರುವುದರಿಂದ 2023-24ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ತರಗತಿಗಳು ಮುಂಜಾನೆಯ ಅವಧಿಯಲ್ಲಿ ಯಥಾ ಪ್ರಕಾರ ಪಾಠ-ಪ್ರವಚನ ನಡೆಸಬೇಕು .ಮದ್ಯಾಹ್ನದಿಂದ ನಡೆದ ಪರೀಕ್ಷೆ ಉತ್ತರ ಪತ್ರಿಕೆಗಳ ಬಂಡಲಗಳನ್ನು ಅದೇ ದಿನದಂದು ಸಾಯಂಕಾಲ ಅಂಚೆ ಕಛೇರಿಗೆ ರವಾನೆ ಮಾಡಬೇಕು.
`ಶಿಕ್ಷಕ ಮಿತ್ರ’ ತಂತ್ರಾಂಶದ ಹೆಸರನ್ನು `ಸೇವಾ ಮಿತ್ರ’ ಎಂದು ಬದಲಾಯಿಸಲಾಗಿದೆ.ಅಲ್ಲದೆ ಪ್ರಸ್ತುತ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ವಿಶೇಷ ಕ್ರೀಡಾನಿಧಿ ಶುಲ್ಕ ಸೇರಿದಂತೆ ಎಲ್ಲ ಶುಲ್ಕಗಳನ್ನು ನಿಗದಿತ ದಿನಾಂಕದೊಳಗೆ ಇಲಾಖೆಗೆ ಪಾವತಿಸಬೇಕು ಎಂದು ಡಿಡಿಪಿಯು ತಾಕೀತು ಮಾಡಿದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸುರೇಶ ಅಕ್ಕಣ್ಣ ಮತ್ತು ಪ್ರ.ಕಾರ್ಯದರ್ಶಿ ಡಾ.ಮನ್ನತ ಡೋಲೆ ಸಹ ಮಾತನಾಡಿದರು.
ಸಭೆಯಲ್ಲಿ ಜ್ಞಾನಸುಧಾ ಪಿಯು ಕಾಲೇಜಿನ ಪ್ರಾಚಾರ್ಯ ಚನ್ನವೀರ ಪಾಟೀಲ ಸೇರಿದಂತೆ ಜಿಲ್ಲೆಯ ಸರ್ಕಾರಿ,ಅನುದಾನಿತ ಮತ್ತು ಅನುದಾನರಹಿತ ಪಪೂ ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು.
ಪ್ರಾಚಾರ್ಯರ ಸಂಘದ ಉಪಾಧ್ಯಕ್ಷ ಅಶೋಕ ರಾಜೋಳೆ ನಿರೂಪಿಸಿದರು.ಜಿಲ್ಲಾ ಪ್ರಾಚಾರ್ಯರ ಸಂಘದ ರಾಜ್ಯ ಪ್ರತಿನಿಧಿ ಪ್ರಭು ಎಸ್.ವಂದಿಸಿದರು.