ವಿದ್ಯಾನಗರ ಬಡಾವಣೆಯ ಮೆಥೋಡಿಸ್ಟ್ ಚರ್ಚ್ ನ ಬೆಳ್ಳಿ ಮಹೋತ್ಸವ ಕ್ರಿಸ್ತ ತತ್ವ ಪಾಲನೆಯಿಂದ ಶಾಂತಿ ಸಾಧ್ಯ
ಬೀದರ್ನ ವಿದ್ಯಾನಗರ ಬಡಾವಣೆಯ ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್ ನ ಬೆಳ್ಳಿ ಮಹೋತ್ಸವ ನಿಮಿತ್ತ ಶನಿವಾರ ಸಂಜೆ ಹಮ್ಮಿಕೊಂಡಿದ್ದ ದೈವ ಸಂದೇಶ ಕಾರ್ಯಕ್ರಮವನ್ನು ಸಭಾ ಪಾಲಕರಾದ ನಿರ್ಮಲಾ ಸೈಮನ್ ಮಾರ್ಕ್ ಉದ್ಘಾಟಿಸಿದರು. ಡಾ.ಸತೀಶಕುಮಾರ ಎಂ. ಡೇವಿಡ್, ರೆ.ಸೈಮನ್ ಮಾರ್ಕ್, ಬಿ.ಜೆ. ಸ್ಯಾಮೂವೆಲ್, ಸ್ವಾಮಿದಾಸ ಬೇಂದ್ರೆ, ಎಂ.ಎಚ್. ಡೇವಿಡ್, ಸುಧಾಕರ ಕಟ್ಟಿ, ಸಂಪತಕುಮಾರ, ಸಲೋಮನ್, ಅರುಣ, ಸುಭದ್ರಾ ಡೇವಿಡ್, ಸರೋಜನಿ ಶಿರೋಮಣಿ ಇತರರಿದ್ದರು.
ಬೀದರ್: ಜಾಗತಿಕ ಮಟ್ಟದ ಎಲ್ಲ ಸಮಸ್ಯೆಗಳಿಗೆ ಹಾಗೂ ಎಲ್ಲೆಡೆ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸಲು ಕ್ರಿಸ್ತನ ತತ್ವಗಳ ಪರಿಪಾಲನೆಯೇ ಸರಳ ಮಾರ್ಗವಾಗಿವೆ ಎಂದು ವಿದ್ಯಾನಗರ ಚರ್ಚ್ ಸಭಾ ಪಾಲಕರಾದ ನಿರ್ಮಲಾ ಸೈಮನ್ ಮಾರ್ಕ್ ಹೇಳಿದರು.
ಇಲ್ಲಿನ ವಿದ್ಯಾನಗರ ಬಡಾವಣೆಯ ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್ ನ ಬೆಳ್ಳಿ ಮಹೋತ್ಸವ ನಿಮಿತ್ತ ಶನಿವಾರ ಸಂಜೆ ಹಮ್ಮಿಕೊಂಡಿದ್ದ ದೈವ ಸಂದೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ಷಮಾ ಗುಣಕ್ಕಿಂತ ಶ್ರೇಷ್ಠವಾದದ್ದು ಮತ್ತೊಂದಿಲ್ಲ ಎಂದು ಸಾರುವ ಜತೆಗೆ ವಿಶ್ವಕ್ಕೆ ಸಮಾನತೆ, ಮಾನವೀಯತೆ ಹಾಗೂ ಶಾಂತಿ ಸಂದೇಶ ನೀಡಿದ ಯೇಸುಕ್ರಿಸ್ತನ ಚಿಂತನೆಗಳು ಜಾಗತಿಕ ಮೌಲ್ಯದಿಂದ ಕೂಡಿವೆ ಎಂದು ತಿಳಿಸಿದರು.
ಮಾನವೀಯ ಮೌಲ್ಯಕ್ಕೆ ಒತ್ತು ನೀಡಿ ಹೆಜ್ಜೆಯಿಟ್ಟಾಗ ಪ್ರತಿಯೊಬ್ಬರು ಸಹ ಸಾರ್ಥಕ ಜೀವನ ಸಾಗಿಸಲು ಸಾಧ್ಯ. ಕ್ರಿಸ್ತನ ಒಂದೊಂದು ವಿಚಾರಗಳಲ್ಲೂ ಅದ್ಭುತ ಶಕ್ತಿ, ಪರಮಸತ್ಯ ಅಡಗಿವೆ. ಉತ್ತಮ ವಿಚಾರಗಳ ಜತೆಗೆ ಸೇವೆ ಮತ್ತು ತ್ಯಾಗದ ಮನೋಭಾವ ನಮ್ಮದಾಗಬೇಕು ಎಂದು ಕರೆ ನೀಡಿದರು.
ವಿದ್ಯಾನಗರ ಬಡಾವಣೆಯಲ್ಲಿ ಚರ್ಚ್ ಸ್ಥಾಪಿಸಿ 25 ವರ್ಷ ಆಗಿದೆ. ಹೀಗಾಗಿ ಎರಡು ದಿನ ಬೆಳ್ಳಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಚರ್ಚ್ ಅಭಿವೃದ್ಧಿಯಲ್ಲಿ ಹಲವರ ಕೊಡುಗೆ ಇದೆ ಎಂದು ಹೇಳಿದರು.
ದೈವ ಸಂದೇಶ ನೀಡಿದ ಡಾ.ಸತೀಶಕುಮಾರ ಎಂ. ಡೇವಿಡ್, ಯೇಸು ಕ್ರಿಸ್ತ ಅಂದರೆ ಶಾಂತಿ, ಮಾನವೀಯತೆ ಮತ್ತೊಂದು ಹೆಸರು. ಇಂದು ಜಾಗತಿಕ ಮಟ್ಟದಲ್ಲಿ ನಾನಾ ಸಮಸ್ಯೆಗಳು ಕಾಣುತ್ತಿವೆ. ಅಶಾಂತಿ ತಾಂಡವವಾಡುತ್ತಿದೆ. ಹಿಂಸಾಚಾರ ನಡೆದಿವೆ. ಇದಕ್ಕೆಲ್ಲ ಕ್ರಿಸ್ತನ ತತ್ವ, ಚಿಂತನೆಗಳಲ್ಲಿ ಪರಿಹಾರವಿದೆ ಎಂದು ಹೇಳಿದರು.
ರೆ.ಸೈಮನ್ ಮಾರ್ಕ್, ಬಿ.ಜೆ. ಸ್ಯಾಮೂವೆಲ್, ಸ್ವಾಮಿದಾಸ ಬೇಂದ್ರೆ, ಎಂ.ಎಚ್. ಡೇವಿಡ್, ಸುಧಾಕರ ಕಟ್ಟಿ, ಸಂಪತಕುಮಾರ, ಸಲೋಮನ್, ಅರುಣ, ಸುಭದ್ರಾ ಡೇವಿಡ್, ಸರೋಜನಿ ಶಿರೋಮಣಿ ಇತರರಿದ್ದರು.