ವಿಕಾಸ ಅಕಾಡೆಮಿ ಜಿಲ್ಲಾಮಟ್ಟದ ಸಭೆ: ಬಸವರಾಜ ಪಾಟೀಲ ಸೇಡಂ ಹೇಳಿಕೆ ಭಾರತೀಯ ಸಂಸ್ಕøತಿ ಉತ್ಸವಕ್ಕೆ 20 ಲಕ್ಷ ಜನ
ಬೀದರ್: 2025 ರ ಜನವರಿ 29 ರಿಂದ ಫೆಬ್ರುವರಿ 6 ರ ವರೆಗೆ ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ನಡೆಯಲಿರುವ ಭಾರತೀಯ ಸಂಸ್ಕøತಿ ಉತ್ಸವ-7 ರಲ್ಲಿ ದೇಶದ ವಿವಿಧೆಡೆಯ 20 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ರಾಜ್ಯಸಭೆ ಮಾಜಿ ಸದಸ್ಯರೂ ಆದ ವಿಕಾಸ ಅಕಾಡೆಮಿಯ ಮುಖ್ಯ ಸಂಯೋಜಕ ಡಾ. ಬಸವರಾಜ ಪಾಟೀಲ ಸೇಡಂ ಹೇಳಿದರು.
ನಗರದ ಜನಸೇವಾ ಶಾಲೆ ಸಭಾಂಗಣದಲ್ಲಿ ಭಾನುವಾರ ನಡೆದ ವಿಕಾಸ ಅಕಾಡೆಮಿಯ ಜಿಲ್ಲಾಮಟ್ಟದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
ಭಾರತ ವಿಕಾಸ ಸಂಗಮದ ಪ್ರಮುಖ ಕೆ.ಎನ್. ಗೋವಿಂದಾಚಾರ್ಯ ಅವರ ನೇತೃತ್ವದಲ್ಲಿ ವಿಕಾಸ ಸಂಗಮದ ದೇಶದ 12 ರಾಜ್ಯಗಳ 10 ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
12 ಎಕರೆಯಲ್ಲಿ ಕೃಷಿ ಪ್ರದರ್ಶನ, 8 ಎಕರೆಯಲ್ಲಿ ವಿಜ್ಞಾನ ಪ್ರದರ್ಶನ, ಶೈಕ್ಷಣಿಕ ಸಮಾವೇಶ, ಗ್ರಾಮೀಣ ವಿಕಾಸ ಸಮಾವೇಶ, ಯುವ ಸಮಾವೇಶ, ಮಹಿಳಾ ಸಮಾವೇಶ, ಧಾರ್ಮಿಕ ಸಮಾವೇಶ ಮತ್ತಿತರ ಕಾರ್ಯಕ್ರಮಗಳು ಜರುಗಲಿವೆ. 50 ಸಾವಿರ ಮಾತೆಯರು 3 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಕೈ ತುತ್ತು ತಿನ್ನಿಸಲಿದ್ದಾರೆ ಎಂದು ಹೇಳಿದರು.
ಎಲ್ಲ ಕ್ಷೇತ್ರಗಳ ಮೇಲೂ ಬೆಳಕು ಚೆಲ್ಲಲಿರುವ ಭಾರತೀಯ ಸಂಸ್ಕøತಿ ಉತ್ಸವದ ಯಶಸ್ವಿಗೆ ಈ ಭಾಗದ ಜನರು ತನು, ಮನ, ಧನದಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.
ವಿಕಾಸ ಅಕಾಡೆಮಿ ಎರಡು ದಶಕದಿಂದ ಈ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಅಕಾಡೆಮಿಯು ಬೀದರ್ ಜಿಲ್ಲೆಗೆ ತನ್ನದೇ ಆದ ಕೊಡುಗೆ ನೀಡಿದೆ. ಕೃಷಿ, ಶಿಕ್ಷಣ, ಯುವ ಸಬಲೀಕರಣ ಸೇರಿದಂತೆ ವಿವಿಧ ಕ್ಷೇತ್ರಗಳ ವಿಕಾಸದ ಚಟುವಟಿಕೆಗಳಲ್ಲಿ ನಿರತವಾಗಿದೆ ಎಂದು ತಿಳಿಸಿದರು.
ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್. ಬಿರಾದಾರ ಮಾತನಾಡಿ, ಬಸವರಾಜ ಪಾಟೀಲ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಭಾಗ ಮಾದರಿ ಆಗಿಸುವ ದಿಸೆಯಲ್ಲಿ ಪ್ರಯತ್ನಗಳು ನಡೆದಿವೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಹೇಳಿದರು.
ವಿಕಾಸ ಅಕಾಡೆಮಿಯ ಕೃಷಿ ಪ್ರಮುಖ ಬಿ.ಎಸ್. ಕುದರೆ, ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಮುಖಂಡ ಚನ್ನಬಸವ ಬಳತೆ, ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ರಾಜೇಂದ್ರ ಮಣಗೇರಿ ಇದ್ದರು.
ಅಕಾಡೆಮಿಯ ಭಾಲ್ಕಿ ತಾಲ್ಲೂಕು ಸಂಯೋಜಕ ರೇವಣಸಿದ್ದ ಜಾಡರ್ ನಿರೂಪಿಸಿದರು. ಬೀದರ್ ತಾಲ್ಲೂಕು ಸಂಯೋಜಕ ಬಸವರಾಜ ಅಷ್ಟಗಿ ವಂದಿಸಿದರು.
ಅಕಾಡೆಮಿಯ ಬೀದರ್, ಔರಾದ್, ಕಮಲನಗರ, ಭಾಲ್ಕಿ ತಾಲ್ಲೂಕು ಸಂಯೋಜಕರು, ಕೌಶಲ ಕೇಂದ್ರ, ಪ್ರಗತಿ ಕೇಂದ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.