ಬೀದರ್

ರೋಟರಿ ಕ್ಲಬ್ ಸೇವೆ ಶ್ಲಾಘನೀಯ: ಡಾ. ಶಿವಾನಂದ ಸ್ವಾಮೀಜಿ

ಬೀದರ್: ಜಗತ್ತಿನ ಅತಿದೊಡ್ಡ ಸಂಸ್ಥೆಯಾದ ರೋಟರಿ ಕ್ಲಬ್ ಸೇವೆಯೇ ಮೊದಲ ಮತ್ತು ಕೊನೆಯ ಧ್ಯೇಯವಾಗಿಟ್ಟುಕೊಂಡು ಮನುಕುಲದ ಏಳಿಗೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹುಲಸೂರಿನ ಡಾ. ಶಿವಾನಂದ ಸ್ವಾಮೀಜಿ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರೋಟರಿ ಕ್ಲಬ್ ಬೀದರ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ
ನಗರದ ಲಾವಣ್ಯ ಕನ್ವೆನ್ಶನ್ ಹಾಲ್‍ನಲ್ಲಿ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶಾಲೆ, ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿ, ಶತಮಾನ ಕಂಡ ರೋಟರಿ ಸಂಸ್ಥೆ ಕಳೆದ 50 ವರ್ಷಗಳಿಂದ ಶಿಕ್ಷಣ, ಆರೋಗ್ಯ, ಪರಿಸರ, ಮಹಿಳಾ ಸಬಲೀಕರಣ, ಮಕ್ಕಳ ಅಭಿವೃದ್ಧಿ ಸೇರಿದಂತೆ ನೂರಾರು ಜನ ಹಿತ ಕಾರ್ಯ ಮಾಡುತ್ತಿದೆ. ಬರುವ ದಿನಗಳಲ್ಲಿ ಸಂಸ್ಥೆಯ ಎಲ್ಲ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಡಾ. ಮಾಣಿಕ ಪವಾರ್ ಮಾತನಾಡಿ,  ಕ್ಲಬ್‍ನ ಮೂಲ ಆಶಯದಂತೆ ಬೀದರ್ ರೋಟರಿ ಕ್ಲಬ್‍ನವರು ಕಾರ್ಯ ಪ್ರವೃತ್ತರಾಗುವುದರೊಂದಿಗೆ ಒಂದು ಹೆಜ್ಜೆ ಮುಂದೆ ಇಟ್ಟು, ಉತ್ತಮ ಶಿಕ್ಷಕರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ನಿರ್ಗತಿಕರಿಗೆ ಹೊಲಿಗೆ ಯಂತ್ರ, ಪ್ರೊತ್ಸಾಹ ಧನ,  ರಕ್ತದಾನ ಶಿಬಿರ, ಶೌಚಾಲಯ ನಿರ್ಮಾಣ, ನೆರೆ ಪರಿಹಾರ, ಕೋವಿಡ್ ಒಳಗಾದವರಿಗೆ ಆಕ್ಸಿಜನ್ ಸಾಂದ್ರಕ ಪೂರೈಕೆ, ಬಡವರಿಗೆ ಆಹಾರ ಕಿಟ್ ವಿತರಣೆ ಹೀಗೆ ನಿರಂತರವಾಗಿ ಹಲವಾರು ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಹರ್ಷದಾಯಕ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಎಚ್‍ಕೆಇ ಸಂಸ್ಥೆಯ ನಿರ್ದೇಶಕ ಬಸವರಾಜ ಖಂಡೆರಾವ್ ಕಲಬುರಗಿ, ಪಿಡಿಜಿ ಕೆ.ಸಿ. ಸೇನನ್, ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್ ಡಾ. ಚಿನ್ನಪ್ಪರೆಡ್ಡಿ, ರೊಟರಿಯ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಯಲಾಲ್, ಎಜಿ ಡಾ. ವಸಂತ ಪವಾರ್, ಮಾತನಾಡಿದರು.
ಕ್ಲಬ್ ನೂತನ ಅಧ್ಯಕ್ಷ ಚಂದ್ರಕಾಂತ ಕಾಡಾದಿ, ಕಾರ್ಯದರ್ಶಿ ಸೋಮಶೇಖರ ಪಾಟೀಲ, ಕೋಶಾಧ್ಯಕ್ಷ ಅನಿಲಕುಮಾರ ಮಸೂದಿ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಅನಿತಾ ಚಿಂತಾಮಣಿ, ಕಾರ್ಯದರ್ಶಿ ಕವಿತಾ ಪ್ರಭಾ ಅಧಿಕಾರ ಸ್ವೀಕರಿಸಿದರು.
ಸ್ಪೂರ್ತಿ ಮೆಲೊಡಿಸ್‍ನ ನಾಗರಾಜ ಜೋಗಿ, ದತ್ತು ಹಾಗೂ ಮಹೇಶ್ವರಿ ಪಾಂಚಾಳ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸ್ವಾತಿ ಸಂತೋಷ ಮಾನಶೆಟ್ಟಿ ಅವರಿಂದ ವಚನ ನೃತ್ಯ ಜರುಗಿತು. ಪ್ರತಿಭಾವಂತ ವಿದ್ಯಾರ್ಥಿಗಳು, ಕಾಲೇಜುಗಳ ಪ್ರಾಚಾರ್ಯರು, ಮುಖ್ಯಶಿಕ್ಷಕರು, ಲಾವಣ್ಯ ಕನ್ವೆನ್ಶನ್ ಹಾಲ್ ಮಾಲೀಕ ಸಿದ್ದು ಮಣಗೆ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪ್ರಕಾಶ ಟೊಣ್ಣೆ, ಕಾರ್ಯದರ್ಶಿ ಅಮರನಾಥ ಡೊಳ್ಳಿ, ಹಿರಿಯ ಸದಸ್ಯರಾದ ಹಾವಶೆಟ್ಟಿ ಪಾಟೀಲ, ರವಿ ಮೂಲಗೆ, ಪ್ರೇಮಿಳಾ ಗುತ್ತಿ, ಮಂಜುಳಾ ಮೂಲಗೆ, ಸುರೇಖಾ ಶೇರಿಕಾರ್, ಉಮಾ ಗಾದಗೆ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೀಲಕುಮಾರ ಔರಾದೆ ಸ್ವಾಗತಿಸಿದರು. ಶಿವಶಂಕರ ಕಾಮಶೆಟ್ಟಿ ನಿರೂಪಿಸಿದರು. ಶಿವಶಂಕರ ಟೋಕರೆ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!