ರೈತರ ಸಮಸ್ಯಗಳಿಗೆ ಪರಿಹಾರ ಒದಗಿಸಲು ಜಿಲ್ಲಾ ಸಚಿವರಿಗೆ ಮನವಿ
ಜಿಲ್ಲೆಯಲ್ಲಿ ಸುಮಾರು 11000 ಕ್ಕಿಂತ ಜಾಸ್ತಿ ರೈತರಿಗೆ ಬರ ಪರಿಹಾರ ಸಿಕ್ಕಿರುವುದಿಲ್ಲ. ತಕ್ಷಣ ಎಲ್ಲಾ ರೈತರಿಗೆ ಬರ ಪರಿಹಾರ ಒದಗಿಸಬೇಕು. ಬೀದರ ಜಿಲ್ಲೆಯಲ್ಲಿ ಬೆಳೆ ವಿಮೆ ಕಟ್ಟಿರುವ ರೈತರಿಗೆ ಬೆಳೆ ನಷ್ಟವಾದರೂ, ಸರಕಾರದ ವತಿಯಿಂದ ಬರ ಘೋಷಣೆ ಮಾಡಿದರೂ ಕೂಡ ಇಲ್ಲಿಯವರೆಗೆ ಬೆಳೆ ವಿಮೆ ಪರಿಹಾರ ಸಿಕ್ಕಿರುವುದಿಲ್ಲ. ಆದಕಾರಣ ತಕ್ಷಣದಲ್ಲಿ ಬೆಳೆ ವಿಮೆ ಪರಿಹಾರ ಕೊಡಿಸಬೇಕು.
ಜಿಲ್ಲೆಯಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿರುವ ರೈತರಿಗೆ ಕಬ್ಬಿನ ಬಿಲ್ಲು ಕೊಟ್ಟಿರುವುದಿಲ್ಲ. ಆದಕಾರಣ ತಕ್ಷಣದಲ್ಲಿ ರೈತರ ಖಾತೆಗೆ ಸಂಪೂರ್ಣ ಬಿಲ್ಲು ಜಮೆ ಮಾಡಬೇಕು. ಉದಾ: ಭಾಲ್ಕೇಶ್ವರ, ಬಿ.ಕೆ.ಎಸ್.ಕೆ., ನಾರಂಜಾ.ಜಿಲ್ಲೆಯಲ್ಲಿ ಕೃಷಿ ಪಂಪಸೆಟಗಳಿಗೆ ಸಮರ್ಪಕ ಹಾಗೂ ಗುಣಮಟ್ಟದ ವಿದ್ಯುತ್ ಸಿಗುತ್ತಿಲ್ಲ. ಆದಕಾರಣ ಈ ಸಮಸ್ಯೆ ಶೀಘ್ರದಲ್ಲಿ ಬಗೆಹರಿಸಿ, ಹೊಸದಾಗಿ ನೊಂದಣಿ ಪ್ರಾರಂಭಿಸಬೇಕು. ಮತ್ತು ರಾತ್ರಿ ಹೊತ್ತಿನಲ್ಲಿ ತೋಟದ ಮನೆಗೆ ವಿದ್ಯುತ್ ಪೂರೈಸಬೇಕು. ಬೀದರ ಜಿಲ್ಲೆಯಲ್ಲಿನ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಮಾರುಕಟ್ಟೆಗೆ ತಂದಿರುವ ದವಸ ಧಾನ್ಯಗಳಿಗೆ ಖಡಿ ಛನ್ನಿ, ಮತ್ತು ಅಡ್ಡ ಛನ್ನಿ ಮಾಡಿದರೂ ಕೂಡ ಪ್ರತಿ ಕ್ವಿಂಟಲ್ಗೆ 1 ಕೆ.ಜಿ. 400 ಗ್ರಾಂ. ಕಡತ ಮತ್ತು ಶೇಕಡಾವಾರು 2% ರೂಪಾಯಿ ಕಮಿಷನ್ ತೆಗೆದುಕೊಳ್ಳುತ್ತಿದ್ದು, ಇದನ್ನು ರೈತರ ಮೇಲೆ ಮಾಡಿರುವ ಘೋರ ಅನ್ಯಾಯ. ಇದಕ್ಕೆ ತಕ್ಷಣ ಕಡಿವಾಣ ಹಾಕಿ, ರೈತರ ಹಿತ ಕಾಪಾಡಬೇಕು. ಬಸವಕಲ್ಯಾಣ ತಾಲೂಕಿನ ಅಟ್ಟೂರ್ ಮತ್ತು ಕೊಹಿನೂರ್ ಕೆರೆಗಳು ಒಡೆದು, ಕೆಳ ಪಾತ್ರದಲ್ಲಿನ ಜಮೀನಿನ ಮಣ್ಣು ಕೊಚ್ಚಿಕೊಂಡು ಸಂಪೂರ್ಣ ಜಮೀನು ಹಾಳಾಗಿದ್ದು, ಅದಕ್ಕೆ ತಕ್ಷಣದಲ್ಲಿ ಪರಿಶೀಲನೆ ಮಾಡಿ, ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲದಿದಲ್ಲಿ ಹೋರಾಟ ಅನಿವಾರ್ಯ.ಅರಣ್ಯ ಇಲಾಖೆಯ ವತಿಯಿಂದ ತಂತಿಬೇಲಿ ಹಾಕಲು ರೈತರಿಗೆ 50% ಧನ ಸಹಾಯವನ್ನು 5 ಕಿ.ಮೀ. ರಿಸರ್ವ್ ಫಾರೆಸ್ಟ್ ವ್ಯಾಪ್ತಿಯ ಒಳಗಡೆ ಇರುವ ರೈತರ ಜಮೀನುಗಳಿಗೆ ಇದ್ದುದನ್ನು ವಿಸ್ತರಿಸಿ, ಎಲ್ಲಾ ಕಡೆ ಈ ಸೌಲಭ್ಯ ಕೊಡಬೇಕು. ಏಕೆಂದರೆ, ಕಾಡು ಪ್ರಾಣಿಗಳ ಹಾವಳಿ ಅರಣ್ಯ ಅಲ್ಲದೇ ಎಲ್ಲಾ ಭಾಗದಲ್ಲಿದೆ. ಬೀದರ ಜಿಲ್ಲೆಯಲ್ಲಿ ಎಲ್ಲಾ ತಾಲೂಕಿನಲ್ಲಿ ಸೋಲಾರ್ ತಂತಿ ಬೇಲಿ ಸಲುವಾಗಿ ಈಗಾಗಲೇ ರೈತರು ಸಾಕಷ್ಟು ಅರ್ಜಿಗಳು ಸಲ್ಲಿಸಿದ್ದು, ಆದಷ್ಟು ಬೇಗ 90% ಧನ ಸಹಾಯದಲ್ಲಿ ರೈತರಿಗೆ ಒದಗಿಸಿಕೊಡಬೇಕು.ಈಗಾಗಲೇ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಜಲ್ ದರ ಹೆಚ್ಚಿಸಿದ್ದು, ರೈತರ ಮೇಲೆ ಹೊರೆಯಾಗುತ್ತದೆ. ತಕ್ಷಣದಲ್ಲಿ ಹೆಚ್ಚು ಮಾಡಿರುವ ದರವನ್ನು ಹಿಂದಕ್ಕೆ ಪಡೆಯಬೇಕು.
ಎಲ್ಲಾ ಸಮಸ್ಯೆಗಳು ಒಂದು ವಾರದಲ್ಲಿ ಬಗೆಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೀದರ ಘಟಕದ ವತಿಯಿಂದ ಒತ್ತಾಯಿಸಿ ಇಂದು ಜಿ.ಪಂ ಸಭಾಂಗಣದಲ್ಲಿ ಸಚಿವರಿಗೆ ಮನವಿ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಿದ್ರಾಮಪ್ಪಾ ಆಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷರಾದ ಶ್ರೀಮಂತ ಬಿರಾದಾರ, ಜಿಲ್ಲಾ ಪ್ರ.ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಸುಭಾಷ ರಗಟೆ, ಪ್ರವೀಣ ಕುಲಕರ್ಣಿ, ಚಂದ್ರಶೇಖರ ಜಮಖಂಡಿ, ರೇವಣಸಿದ್ದಪ್ಪ ಯರಬಾಗ, ಪ್ರಕಾಶ ಬಾವಗೆ, ಸತೀಶ ನನ್ನೂರೆ, ವಿಶ್ವನಾಥ ಧರಣೆ, ಧೂಳಪ್ಪಾ ಆಣದೂರ ಇದ್ದರು.