ರೈತರ ನೆರವಿಗೆ ಧಾವಿಸಲು ಸಿಎಂಗೆ ಪತ್ರ ಬರೆದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್
ಬೀದರ್ (ಆ.09): ನಿರಂತರವಾಗಿ ಸುರಿದ ಮಳೆಯಿಂದ ಬೆಳೆ ಕಳೆದುಕೊಂಡಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಜಿಲ್ಲೆಯ ರೈತರಿಗೆ ಕೂಡಲೇ ಪರಿಹಾರ ಒದಗಿಸಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪತ್ರ ಬರೆದಿದ್ದಾರೆ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಬೀದರ್ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶದ ಹಾಗೂ ಕಾರಂಜಾ ಹಿನ್ನೀರಿನ ಭಾಗ ಮತ್ತು ಹಳ್ಳಗಳ ಹತ್ತಿರದ ರೈತರ ಜಮೀನುಗಳಲ್ಲಿ ನೀರು ನಿಂತು ಬಿತ್ತನೆ ಮಾಡಿದ್ದ ಉದ್ದು, ಹೆಸರು, ಸೋಯಾ, ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿವೆ.
ಸಾಲಸೂಲ ಮಾಡಿ ಜಮೀನು ಹದಗೊಳಿಸಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿರುವ ಅನ್ನದಾತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ನಮ್ಮ ಭಾಗದ ರೈತರ ಬೆನ್ನಿಗೆ ನಿಲ್ಲುವುದು ಅತ್ಯವಶ್ಯಕವಾಗಿದೆ.
ಆದರಿಂದ ತಾವು ಸಂಬಂಧಿಸಿದ ಅಧಿಕಾರಿಗಳಿಗೆ, ಸಚಿವರಿಗೆ ಸೂಚನೆ ನೀಡುವ ಮೂಲಕ ಶೀಘ್ರವಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಂದ ಬೆಳೆ ಹಾನಿ ವರದಿ ತರಿಸಿಕೊಂಡು, ಬೆಳೆ ಕಳೆದುಕೊಂಡಿರುವ ರೈತರಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ.ಗಳ ಪರಿಹಾರವನ್ನು ಕೂಡಲೇ ಒದಗಿಸಿಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯರವರಿಗೆ ಮಂಗಳವಾರ ಬರೆದಿರುವ ಪತ್ರದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದ್ದಾರೆ.