ಯರನಳ್ಳಿ ಶಾಲೆಯಲ್ಲಿ ಪ್ರಕೃತಿ ಸಂರಕ್ಷಣೆ ದಿನಾಚರಣೆ ಪ್ರಕೃತಿ ವಿಕೋಪಕ್ಕೆ ಅರಣ್ಯ ನಾಶ ಕಾರಣ
ಬೀದರ್: ಪ್ರಕೃತಿ ವಿಕೋಪಗಳಿಗೆ ಅರಣ್ಯ ನಾಶವೇ ಕಾರಣವಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ಶಿವಕುಮಾರ ಗಾಜರೆ ನುಡಿದರು.ಬೀದರ್ ತಾಲ್ಲೂಕಿನ ಯರನಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪ್ರಕೃತಿ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಾನವ ತನ್ನ ಅನುಕೂಲಕ್ಕಾಗಿ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿರುವುದು ಕಳವಳಕಾರಿ. ಇದು, ಹೀಗೆಯೇ ಮುಂದುವರಿದರೆ ಮನುಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.ಮರ, ಗಿಡ, ಬೆಟ್ಟ, ಸರೋವರ ಸೇರಿ ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಪಾಂಡುರಂಗ ಬೆಲ್ದಾರ್ ಮಾತನಾಡಿ, ಪರಿಸರ ಮಾಲಿನ್ಯದಿಂದಾಗಿಯೇ ಪ್ರಕೃತಿಯಲ್ಲಿ ಅನೇಕ ಏರು ಪೇರುಗಳಾಗುತ್ತಿವೆ. ಪರಿಸರ ಸಂರಕ್ಷಿಸಿದರೆ ಮಾತ್ರ ಮನುಕುಲಕ್ಕೆ ಉಳಿಗಾಲವಿದೆ ಎಂದು ತಿಳಿಸಿದರು.
ವಿಜ್ಞಾನ ಶಿಕ್ಷಕ ಸಂಜೀವಕುಮಾರ ಸ್ವಾಮಿ ವಿಶೇಷ ಉಪನ್ಯಾಸ ನೀಡಿದರು. ವಲಯ ಅರಣ್ಯ ಅಧಿಕಾರಿ ಪ್ರವೀಣ ಮೋರೆ, ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ರವಿಕುಮಾರ ಕುಮನೂರ, ಎಸ್‍ಡಿಎಂಸಿ ಅಧ್ಯಕ್ಷ ಸಲೀಂಖಾನ್, ಶಿಕ್ಷಕರಾದ ರಮೇಶ, ಹೇಮಲತಾ, ರಂಜನಿ, ಸುರೇಖಾ ಇದ್ದರು. ಶಿಕ್ಷಕ ಪ್ರಕಾಶ ಪಾಟೀಲ ಸ್ವಾಗತಿಸಿದರು. ಸಂಜೀವ ಬಿ. ಸೂರ್ಯವಂಶಿ ನಿರೂಪಿಸಿದರು. ರಮಾಬಾಯಿ ವಂದಿಸಿದರು.