ಬೀದರ್

ಮಾತುಗಳು ಅಳಿಯುತ್ತವೆ, ಬರಹಗಳು ಉಳಿಯುತ್ತವೆ – ಪ್ರೊ. ಬಸವರಾಜ ಡೊಣೂರ

ಬೀದರ: ಈ ಜಗತ್ತಿನಲ್ಲಿ ಮಾತುಗಳು ಅಳಿಯುತ್ತವೆ. ಬರಹಗಳು ಮಾತ್ರ ಶತಶತಮಾನದವರೆಗೆ ಉಳಿಯುತ್ತವೆ. ಹೀಗಾಗಿ ನಾವು ಅಳಿದರೂ ಉಳಿಯುವುದು ಮಾತ್ರ ನಮ್ಮ ಉತ್ತಮ ಕೃತಿಗಳು ಮತ್ತು ಉತ್ತಮ ಕಾರ್ಯಗಳು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯ ನಿರ್ದೇಶಕ ಪ್ರೊ. ಬಸವರಾಜ ಡೊಣೂರ ತಿಳಿಸಿದರು.
ಕರ್ನಾಟಕ ಕಾಲೇಜು ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ನಗರದ ಕರ್ನಾಟಕ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡ ‘ಕನ್ನಡ ಸಾಹಿತ್ಯ ಸಮೀಕ್ಷೆ’ ಮತ್ತು ‘ಕನ್ನಡ ಸಾಹಿತ್ಯಾವಲೋಕನ’ ಕೃತಿಗಳ ಲೋಕಾರ್ಪಣೆ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಹಾಗೂ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಈ ಎರಡೂ ಕೃತಿಗಳಲ್ಲಿ ಒಟ್ಟು 27 ಲೇಖನಗಳಿವೆ. ಇವು ಓದಿ ಮರೆಯುವ ಲೇಖನಗಳಲ್ಲ. ಬದಲಾಗಿ ಕನ್ನಡ ವಿದ್ಯಾರ್ಥಿಗಳಿಗೆ ಸಂಜೀವಿನಿಗಳಾಗಿವೆ. ಬರಹಗಳಿಗೆ ದೀರ್ಘಕಾಲೀನ ಆಯುಷ್ಯವಿದೆ. ಹೀಗಾಗಿ ಅವು ಓದುಗರ ಹೃದಯದಲ್ಲಿ ಶಾಶ್ವತವಾಗಿರುತ್ತವೆ. ವಿದ್ಯಾರ್ಥಿಗಳು ಕೂಡಾ ತಮ್ಮ ಜೀವನದಲ್ಲಿ ಆಸಕ್ತಿ, ಅವಧಾನ, ಶಿಸ್ತು ಮತ್ತು ತಾಳ್ಮೆ ಅಳವಡಿಸಿಕೊಂಡರೆ ಇಂತಹ ಕೃತರಚನೆಯಂತಹ ಉತ್ತಮ ಸಾಧನೆಗಳನ್ನು ಮಾಡಲು ಸಾಧ್ಯ ಎಂದು ತಿಳಿಸಿದರು.
ಎರಡೂ ಕೃತಿಗಳ ಪರಿಚಯ ಮಾಡಿಕೊಟ್ಟ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಕಲ್ಯಾಣರಾವ ಜಿ. ಪಾಟೀಲ ಮಾತನಾಡಿ ಈ ಎರಡೂ ಕೃತಿಗಳು ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ವಿಷಯ ಅಧ್ಯಯನಕ್ಕೆ ಸಹಕಾರಿಯಾಗಿವೆ. ವಿದ್ಯಾರ್ಥಿಗಳಿಗೆ ಓದುವುದೇ ಒಂದು ಬೆಳಕು. ವಿದ್ಯೆಯೆಂಬುದು ಓದುಗರ ಕೈವಶ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ನಿರಂತರವಾಗಿ ಓದಬೇಕು. ಹಾಗೆಯೇ ಔಪಚಾರಿಕ ಶಿಕ್ಷಕರಿಂದ ಸಂಸ್ಥೆಗಳು ಉಳಿಯುವುದಿಲ್ಲ. ಬದಲಾಗಿ ಅಧ್ಯಯನಶೀಲ ಶಿಕ್ಷಕರಿಂದ ಮಾತ್ರ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಉಳಿಯುತ್ತಾರೆ ಎಂದರು.
ಕನ್ನಡ ಸಾಹಿತ್ಯ ಸಮೀಕ್ಷೆ ಕೃತಿಯ ಸಂಪಾದಕ ಪ್ರೊ. ಶ್ರೀಶೈಲ ನಾಗರಾಳ ಮಾತನಾಡಿ ಪುಸ್ತಕಗಳನ್ನು ಸ್ವತಃ ಶಿಕ್ಷಕರೇ ಬರೆದು, ಕಾಲೇಜು ವತಿಯಿಂದ ಮುದ್ರಣ ಮಾಡುವ ರಾಜ್ಯದ ಕೆಲವೇ ಕೆಲವು ಕಾಲೇಜುಗಳಲ್ಲಿ ಬೀದರನ ಕರ್ನಾಟಕ ಕಾಲೇಜು ಒಂದಾಗಿದೆ. ವ್ಯಕ್ತಿಯಿಂದ ಸಂಸ್ಥೆ ಮತ್ತು ಸಂಸ್ಥೆಯಿಂದ ವ್ಯಕ್ತಿ ಉಳಿಯುತ್ತದೆ. ಇವೆರಡೂ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ ಎಂದು ತಿಳಿಸಿದರು.
ಎರಡೂ ಕೃತಿಗಳ ಪ್ರಧಾನ ಸಂಪಾದಕ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ 1941ರಲ್ಲಿ ಆರಂಭವಾದ ಕರ್ನಾಟಕ ಕಾಲೇಜು ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದೆ. ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಕರ್ತವ್ಯದಲ್ಲಿದ್ದಾರೆ. ಕಾರಣ ನಮ್ಮಲ್ಲಿ ಅಧ್ಯಯನಾಂಗ, ಸಂಶೋಧನಾಂಗ ಮತ್ತು ಪ್ರಸಾರಾಂಗ ವಿಭಾಗಗಳು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿವೆ. ಇದಕ್ಕೆ ಸಂಸ್ಥೆಯ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳ ಸಹಕಾರ ತುಂಬಾ ಇದೆ ಎಂದು ತಿಳಿಸಿದರು. ಇದುವರೆಗೆ ಕರ್ನಾಟಕ ಕಾಲೇಜಿನಲ್ಲಿ 44 ಎಂ.ಫಿಲ್, 39 ಪಿಎಚ್.ಡಿ ಪದವಿ ನೀಡಲಾಗಿದೆ. ಈ ಎರಡೂ ಕೃತಿಗಳನ್ನು ಕೆಪಿಎಸ್‍ಸಿ, ನೆಟ್ ಪರೀಕ್ಷೆ, ಸೆಟ್ ಪರೀಕ್ಷೆಗಳನ್ನು ಪರಿಗಣನೆಗೆ ತೆಗೆದುಕೊಂಡು ರಚಿಸಲಾಗಿದೆ. ಮಕ್ಕಳು ಕೊಂಡು ಓದಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ.ಶೆಟಕಾರ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರಾಶಿ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ರವಿ ಹಾಲಳ್ಳಿ, ಶ್ರೀನಾಥ ನಾಗೂರೆ, ಪ್ರಭುಶೆಟ್ಟಿ ಮೂಲಗೆ, ಶಾಂತಕುಮಾರ ಪಾಟೀಲ, ಕನ್ನಡ ಸಾಹಿತ್ಯಾವಲೋಕ ಕೃತಿ ಸಂಪಾದಕ ಡಾ. ಅಶೋಕ ಕೋರೆ, ಡಾ. ಸುನಿತಾ ಕೂಡ್ಲಿಕರ್, ಡಾ. ಮಹಾನಂದ ಮಡಕಿ, ಡಾ. ಸಂಗಪ್ಪ ತೌಡಿ, ಶಂಭುಲಿಂಗ ಕಾಮಣ್ಣ, ವೀರಣ್ಣ ಕುಂಬಾರ ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹಂಗರಗಿ ಸ್ವಾಗತಿಸಿದರು. ಕಲಾವಿದೆ ವೀಣಾ ದೇವಿದಾಸ್ ಚಿಮಕೋಡೆ ಪ್ರಾರ್ಥಿಸಿದರು. ಮಾನಾ ಸಂಗೀತಾ ನಿರೂಪಿಸಿದರು. ಉಪಪ್ರಾಂಶುಪಾಲ ಅನೀಲಕುಮಾರ ಚಿಕ್ಕಮಾಣೂರ ವಂದಿಸಿದರು.
ಡಾ. ಜಗನ್ನಾಥ ಹೆಬ್ಬಾಳೆ

Ghantepatrike kannada daily news Paper

Leave a Reply

error: Content is protected !!