ಮಹಿಳೆಯರು ಸಹಕಾರೀ ಬ್ಯಾಂಕಿಂಗ ಆಡಳಿತ ವ್ಯವಸ್ಥೆಯಲ್ಲೂ ಸಕ್ರೀಯವಾಗಿ ಬಾಗವಹಿಸಿ ತಮ್ಮ ಛಾಪು ಮೂಡಿಸಬೇಕಾಗಿದೆ : ಶ್ರೀಮತಿ ಮಂಗಳಾ ಭಾಗವತ
ಗ್ರಾಮೀಣ ಭಾರತದ ಕೃಷಿ ಕ್ಷೇತ್ರದಲ್ಲಿ ಸಹಕಾರೀ ಕ್ಷೇತ್ರದ ಪಾತ್ರವು ಬಹಳ ಮಹತ್ವದ್ದಾಗಿದೆ. ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ, ಕುರಿಕೋಳಿ ಸಾಕಾಣಿಕೆ ಮತ್ತು ತೋಟಗಾರಿಕೆ ಬೇಸಾಯಗಳಲ್ಲಿ ಹೆಚ್ಚಿನ ಕೆಲಸಗಳನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಆದರೆ ಕೃಷಿ ಕ್ಷೇತ್ರದ ಬೆನ್ನೆಲುಬಾದ ಸಹಕಾರ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯ ತೀರಾ ನಗಣ್ಯವಾಗಿದೆ. ಈ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದಲ್ಲೂ ಮಹಿಳಾ ಪ್ರಾತಿನಿಧ್ಯ ಕಲ್ಪಿಸುವ ಸಲುವಾಗಿ ಸಹಕಾರ ಸಂಘಗಳ ಆಡಳಿತ ಮಂಡಳಿಯಲಿ ಮಹಿಳಾ ನಿರ್ದೇಶಕರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಇತ್ತೀಚ್ಚೇಗೆ 97ನೇ ಸಂವಿಧಾನ ತಿದ್ದುಪಡಿಯಲ್ಲಿ ಮಹಿಳಾ ಮೀಸಲಾತಿಯನ್ನು ಕಡ್ಡಾಯವಾಗಿ ಮಾಡಲಾಗಿದೆ. ಸ್ವ ಸಹಾಯ ಗುಂಪುಗಳ ಮೂಲಕ ಬ್ಯಾಂಕಿನ ಸಾಲ ಪಡೆಯುವಿಕೆ ಮತ್ತು ಮರುಪಾವತಿ ಕ್ಷೇತ್ರದಲ್ಲಿ ತಮ್ಮ ಬಲವನ್ನು ಸಾಬೀತು ಪಡಿಸಿರುವ ಮಹಿಳೆಯರು ಸಹಕಾರೀ ಬ್ಯಾಂಕಿಂಗ ಆಡಳಿತ ವ್ಯವಸ್ಥೆಯಲ್ಲೂ ಸಕ್ರೀಯವಾಗಿ ಬಾಗವಹಿಸಿ ತಮ್ಮ ಛಾಪು ಮೂಡಿಸಬೇಕಾಗಿದೆ. ಸಹಕಾರೀ ಸಂಸ್ಥೆಗಳ ಸದಸ್ಯರಾಗಿ ಸಹಕಾರೀ ಕಾನೂನುಗಳ ಅರಿವು ಮೂಡಿಸಿಕೊಂಡು ಕ್ರಿಯಾಶೀಲವಾಗಿ ಆಢಳಿತದಲ್ಲಿ ಪಾಲುಗೊಳ್ಳಬೇಕಾಗಿದೆ. ಇದಕ್ಕಾಗಿ ಅವರಿಗೆ ತರಬೇತಿಗಳು ಆವಶ್ಯಕವಾಗಿವೆ ಎಂದು ಬೀದರಿನ ಭಾರತೀಯ ಅಂಚೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿರುವ ಶ್ರೀಮತಿ ಮಂಗಳಾ ಭಾಗವತ ಅವರು ನುಡಿದರು.
ಬೀದರ ಡಿಸಿಸಿ ಬ್ಯಾಂಕಿನ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಕೊಡಗು, ಚಿತ್ರದುರ್ಗ, ರಾಯಚೂರು ಕೊಪ್ಪಳ ಮತ್ತು ಬೀದರ ಜಿಲ್ಲೆಯ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗಾಗಿ ನಬಾರ್ಡ ಸಹಯೋಗದಲ್ಲಿ ನಡೆದ ಮೂರು ದಿನಗಳ ಮಹಿಳಾ ಸಬಲೀಖರಣ ಮತ್ತು ಪ್ಯಾಕ್ಸಗಳ ಕಂಪ್ಯೂಟರೀಕರಣ ತರಬೇತಿಯ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಸಂಘಗಳ ಅಭಿವೃದ್ದಿಗೆ ಉತ್ತಮ ನಾಯಕತ್ವ ಬಹಳ ಮುಖ್ಯವಾಗಿದೆ. ಸಂಘಗಳ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದಾಗ ಅನುಭವ ಸಿಗುತ್ತದೆ ಎಂದು ಹೇಳಿದರು. ಅನುಭವವು ತಿಳುವಳಿಕೆ, ಜ್ಞಾನ ಮತ್ತು ಭಾಗವಹಿಸುವಿಕೆಯಿಂದ ಬರುತ್ತದೆ, ಮಹಿಳೆಯರು ಕೆಲವರ ಪ್ರತಿಕ್ರಿಯೆಗಳಿಗೆ ಅಂಜದೇ ತಮ್ಮ ಕೆಲಸದ ಕಡೆಗೆ ಗಮನ ಕೊಡಬೇಕು. ಯಾರ ಪರಿವೆಯೂ ಇಲ್ಲದೆ ಬೆಳಕನ್ನು ಸೂಸುವ ತನ್ನ ಕಾರ್ಯದಲ್ಲಿ ಮಗ್ನವಾಗಿರುವ ಮಿಂಚುಹುಳದಂತೆ ಗುರಿ ತಲುಪುವಲ್ಲಿ ಏಕಾಗ್ರತೆ ಹೊಂದಿರಬೇಕು ಎಂದು ಅವರು ನುಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಡಿಸಿಸಿ ಬ್ಯಾಂಕಿನ ಕಿರುಹಣಕಾಸು ವಿಭಾಗದ ಉಪಪ್ರಧಾನ ವ್ಯವಸ್ಥಾಪಕ ಬಸವರಾಜ ಕಲ್ಯಾಣ ಅವರು ಮಹಿಳೆಯರ ಸಬಲೀಕರಣ ಎನ್ನುವುದು ಅವರ ಆರ್ಥಿಕ ಸ್ವಾವಲಂಬಿತನದಿಂದ ಸಾಧ್ಯವಿದೆ. ಮಹಿಳೆಯರು ಹೆಚ್ಚೆಚ್ಚು ಉತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸಿ ಆರ್ಥಿಕ ಚೈತನ್ಯ ಗಳಿಸಿದಾಗ ಸಬಲರಾಗಲು ಸಾಧ್ಯವಿದೆ. ಮಹಿಳೆಯೊಬ್ಬಳು ಸಬಲರಾದರೆ ಕುಟುಂಬವೊಂದು ಸಬಲೀಕರಣಗೊಂಡಂತಾಗುತ್ತದೆ. ಮಕ್ಕಳು ಉತ್ತಮ ವಿಧ್ಯಾಬ್ಯಾಸ ಪಡೆಯಲು ನೆರವಾಗುತ್ತದೆ. ಕುಟುಂಬದ ಆರೋಗ್ಯ ವ್ಯವಸ್ಥೆಯಲ್ಲೂ ಸುಧಾರಣೆಯಾಗುತ್ತದೆ. ಮಹಿಳಾ ಸಬಲೀಕರಣ, ಕುಟುಂಬ ಬಲವರ್ಧನೆ, ಸ್ವಾವಲಂಬನೆ ಬದುಕು ಸಂಘಗಳಿಂದ ಸಾಧ್ಯವಾಗಿದೆ ಉದ್ಯೋಗ ಮಾಡಲು ಹಣದ ಆವಶ್ಯಕತೆ ಇರುವವರಿಗೆ ಸ್ವ ಸಹಾಯ ಗುಂಪು ಸಾಲವನ್ನು ಒದಗಿಸಲಾಗುತ್ತಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸಿದ್ದ ಡಿಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ವಿಠಲ ರೆಡ್ಡಿಯವರು ದೇಶದ ಸಹಕಾರಿ ರಂಗವನ್ನು ಗಣಕೀಕರಣಗೊಳಿಸುವ ಗುರಿಯನ್ನು ಸರಕಾರವು ಹೊಂದಿದ್ದು ಈಗಾಗಲೇ 67500 ಪ್ಯಾಕಸಗಳಿಗೆ ಕಂಪ್ಯೂಟರ ಮತ್ತು ಏಕರೂಪ ಸಾಫ್ಟವೇರನ್ನು ಒದಗಿಸಲಾಗಿದೆ. ಪ್ಯಾಕ್ಸಗಳ ವಿವರಗಳನ್ನು ಗಣಕೀಕರನಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಪ್ರತಿಯೊಬ್ಬರೂ ತಮ್ಮ ಜ್ಞಾನ ಕೌಶಲ್ಯಗಳನ್ನು ಕಾಲಕ್ಕೆ ತಕ್ಕಂತೆ ನವೀಕರಿಸಿಕೊಳ್ಳುತ್ತಿದ್ದರೆ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯ. ಜೀವನದಲ್ಲಿ ಹೊಸ ಕೌಶಲ್ಯಗಳನ್ನು ಕಲಿಯುವದಕ್ಕಾಗಿ ತರಬೇತಿಗಳು ಮುಖ್ಯವಾಗಿವೆ ಎಂದು ನುಡಿದರು.
ಸಮಾರಂಭದಲಿ ಕೊಡಗು ಸೋಮವಾರಪೇಟೆಯ ಪ್ಯಾಕ್ಸನ ಪೂರ್ಣಿಮಾ ಚಿತ್ರದುರ್ಗ ಮಲ್ಲಾಪುರದ ಶೈಲಜಾ, ಸಹಾರ್ದದ ಎಸ್ ಜಿ ಪಾಟೀಲ, ಅನಿಲ್ ಪರೇಶ್ಯಾನೆ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರ್ವಹಿಸಿದ ಸಹಾರ್ದ ನಿರ್ದೇಶಕ ಬಿ. ಸುಬ್ರಹ್ಮಣ್ಯ ಪ್ರಭು, ತರಬೇತಿ ಉದ್ದೇಶಗಳನ್ನು ವಿವರಿಸಿದರು. ಸಹಕಾರದಿಂದ ಸಮೃದ್ದಿ ಎಂಬ ತತ್ವÀದಡಿಯಲ್ಲಿ ಸಹಕಾರೀ ಸಂಸ್ಥೆಗಳ ಉನ್ನತೀಕರಣ ಸಹಕಾರೀ ತತ್ವದಡಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು. ಸಹಾರ್ದದ ಉಪನ್ಯಾಸಕ ಮಂಜುನಾಥ ಬಾಗವತ ಧನ್ಯವಾದ ನೀಡಿದರು.