ಮಡಿವಾಳೇಶ್ವರ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ
ಬೀದರಃ ನಗರದ ಮಂಗಲಪೇಟದಲ್ಲಿರುವ ಶ್ರೀ ಮಡಿವಾಳೇಶ್ವರ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. 250 ಮಕ್ಕಳು ಕೃಷ್ಣ-ರಾಧೆಯ ವೇಷ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮವು ಗೋ ಮಾತೆಯ ಪೂಜೆಯೊಂದಿಗೆ ಆರಂಭಗೊಂಡಿತು. ಗೋ ಪೂಜೆಯನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿಶ್ವನಾಥ ಉಪ್ಪೆ, ಕೃಷ್ಣಾ ಕುಲ್ಕರ್ಣಿ ಹಾಗೂ ಸಂಗಮೇಶ ಬಿರಾದರ್ ಅವರು ನೆರವೇರಿಸಿದರು. ಹಾಗೆ ಬೆಣ್ಣೆಯ ಮಡಿಕೆಯನ್ನು ಮುದ್ದು ಕೃಷ್ಣನಿಂದ ಸಂಸ್ಥೆಯ ಸದಸ್ಯರಾದ ಪೀರಪ್ಪಾ ಔರಾದೆ ಒಡೆದರು.
ಕಾರ್ಯಕ್ರಮವನ್ನುದ್ದೇಶಿಸಿ ಹಿರಿಯ ಸಾಹಿತಿ ಎಂ. ಜಿ. ದೇಶಪಾಂಡೆಯವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಂಸ್ಕಾರದ ಕೊರತೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಆಧುನಿಕತೆಯ ಜೀವನಶೈಲಿಯಿಂದ ಸಂಸ್ಕಾರ, ಸಂಪ್ರದಾಯಗಳು ಮರಿಚಿಕೆಯಾಗುತ್ತಿದ್ದು, ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬಿತ್ತುವ ಕೆಲಸ ಮಡಿವಾಳೇಶ್ವರ ಶಾಲೆಯಲ್ಲಿ ನಡೆಯುತ್ತಿರುವುದು ಸಂತಸದಾಯಕವಾಗಿದೆ ಎಂದರು.
ಎರಡು ನೂರಕ್ಕೂ ಅಧಿಕ ಕೃಷ್ಣ-ರಾಧೆಯ ವೇಷ ಧರಿಸಿದ ಎಲ್ಲ ಮಕ್ಕಳಿಗೂ ಇದೇ ಸಂದರ್ಭದಲ್ಲಿ ಶ್ರೀ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಡುಗೊರೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ಕೃಷ್ಣನ ತೊಟ್ಟಿಲು ಕಾರ್ಯಕ್ರಮವನ್ನು ಮಾತೆಯರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶರಣು ಪಾಟೀಲ್, ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಅಚ೯ನಾ ಶಿರಗಿರೆ, ಮಾತೆಯರು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜ್ಯೋತಿ ಪಾಟೀಲ್ ಸ್ವಾಗತಿಸಿದರು, ಚನ್ನಮ್ಮ ಪಾಂಚಾಳ ಹಾಡಿದರು, ಸುವರ್ಣ ಹೊಸಮನಿ ವಂದಿಸಿದರು, ಪ್ರತಿಭಾ ತೇಲಿ ನಿರೂಪಿಸಿದರು.