ಭಾರಿ ಮಳೆ: ಮುನ್ನೆಚ್ಚರಿಕೆ ವಹಿಸಲು ಶಾಸಕ ಪ್ರಭು ಚವ್ಹಾಣ ಮನವಿ
ಜಿಲ್ಲೆಯಲ್ಲಿ ಕೆಲ ದಿನಗಳಿಂದ ಸತತ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯು ಜುಲೈ 27ರಂದು ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.
ಜಾನುವಾರುಗಳು ಮತ್ತು ಮನುಷ್ಯರು ನದಿ, ಹಳ್ಳ, ಕೊಳ್ಳಗಳಿಗೆ ಇಳಿಯಬಾರದು. ತುಂಬಿ ಹರಿಯುವ ಸೇತುವೆಗಳನ್ನು ದಾಟುವುದು ಅಪಾಯಕಾರಿ ಎಂದಿದ್ದು, ಒಂದು ವೇಳೆ ಮನೆ ಬೀಳುವ ಸ್ಥಿತಿಯಲ್ಲಿದ್ದರೆ ತಕ್ಷಣ ಅದರಿಂದ ಹೊರಬಂದು ಸುರಕ್ಷಿತವಾದ ಮನೆಗಳಲ್ಲಿ ಇರಬೇಕೆಂದು ವಿನಂತಿಸಿದ್ದಾರೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಎರಡು ದಿವಸ ವಿಪರೀತ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅನಾವಶ್ಯಕವಾಗಿ ಮನೆಯ ಹೊರಗಡೆ ಓಡಾಡದಿರುವುದು ಸುರಕ್ಷಿತ ಎಂದು ಸಲಹೆ ನೀಡಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳು,
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಇಲಾಖೆ, ಜೆಸ್ಕಾಂ, ಅಗ್ನಿಶಾಮಕ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಎಲ್ಲ ಅಧಿಕಾರಿಗಳು ಮುನ್ನೆಚ್ಚರಿಕೆಯಿಂದ ಇರಬೇಕೆಂದು ಶಾಸಕರು ಪ್ರಕಟಣೆ ಮೂಲಕ ಸೂಚಿಸಿದ್ದಾರೆ.