ಬೀದರ್

ಭಾರತ ಮಣ್ಣಿಗೂ ನಮಗೂ ಅವಿನಾಭಾವ ಸಂಬಂಧವಿದೆ – ಡಾ. ಜಗನ್ನಾಥ ಹೆಬ್ಬಾಳೆ

ಬೀದರ: ಭಾರತ ದೇಶದ ಮಣ್ಣಿಗೂ ನಮಗೂ ಅವಿನಾಭಾವ ಸಂಬಂಧವಿದೆ. ನಮ್ಮ ಶರೀರದಲ್ಲಿ ಪಂಚಭೂತಗಳಿವೆ. ಅವುಗಳಲ್ಲಿ ಮಣ್ಣು ಕೂಡಾ ಒಂದು. ನಮ್ಮ ಶರೀರಕ್ಕೆ ಉಜ್ಜಿದಾಗ ಮಣ್ಣು ಬರುತ್ತದೆಯೇ ವಿನಃ ಬಂಗಾರವಲ್ಲ. ಹೀಗಾಗಿ ಭರತಭೂಮಿ ನಮಗೆ ಏನೆಲ್ಲಾ ನೀಡಿದೆ. ಅದರ ಋಣ ತೀರಿಸುವ ನಿಟ್ಟಿನಲ್ಲಿ ದೇಶಸೇವೆಯಲ್ಲಿ ನಿರತರಾಗೋಣ ಎಂದು ಕರ್ನಾಟಕ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜಗನ್ನಾಥ ಹೆಬ್ಬಾಳೆ ನುಡಿದರು.
ದಕ್ಷಿಣ ಮಧ್ಯ ವಲಯ ಸಾಂಸ್ಕøತಿಕ ಕೇಂದ್ರ ನಾಗಪುರ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಹಾಗೂ ಸಮುದಾಯ ವೈದ್ಯಶಾಸ್ತ್ರ ವಿಭಾಗ ಬ್ರಿಮ್ಸ್, ಬೀದರ ಇವರ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವದ ಪ್ರಯುಕ್ತ ನಮ್ಮ ಮಣ್ಣು ನಮ್ಮ ದೇಶ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತವು ಇಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ವಿಶ್ವಕ್ಕೆ ಯೋಗದ, ಆಯುರ್ವೇದದ ಮತ್ತು ವಸುದೈವ ಕುಟುಂಬಕಂ ಸಂದೇಶ ಸಾರಿದ ದೇಶ ಭಾರತ. ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಯೋಜನೆಗಳ ಸದ್ಬಳಕೆಯೊಂದಿಗೆ ತಮ್ಮ ತಮ್ಮ ಕಾಯಕದಲ್ಲಿ ದೇಶಸೇವೆ ಮಾಡಬೇಕೆಂದು ಯುವಕರಿಗೆ ಸಲಹೆ ನೀಡಿದರು. ಅಲ್ಲದೇ ವೈದ್ಯಕೀಯ ವಿದ್ಯಾರ್ಥಿಗಳು ಬಡರೋಗಿಗಳ ಸೇವೆಯಲ್ಲಿ ಭಾರತ ಮಾತೆಯ ಸೇವೆ ಮನಗಾಣಬೇಕೆಂದು ತಿಳಿಸಿದರು.
ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ ನಮ್ಮ ಮಣ್ಣು ನಮ್ಮ ಕಾರ್ಯಕ್ರಮ ಇದೊಂದು ದೇಶದ ಹೆಮ್ಮೆಯ ಕಾರ್ಯಕ್ರಮ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಪೂರ್ಣಗೊಂಡ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡುವ ನಿಮಿತ್ಯ ಈ ಕಾರ್ಯಕ್ರಮ ದೇಶದಾದ್ಯಂತ ಆಯೋಜನೆ ಮಾಡಲಾಗುತ್ತಿದ್ದು, ಯುವಕರು ತ್ಯಾಗಿಗಳ ರಾಷ್ಟ್ರಭಕ್ತರ ಆದರ್ಶಗಳನ್ನು ಅರಿತು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಉಪನ್ಯಾಸ ನೀಡಿದ ರಾಜ್ಯ ಸಂಪನ್ಮೂಲ ವ್ಯಕ್ತಿ ಆರ್.ಕೆ.ಚಾರಿ ಮಾತನಾಡಿ ಇಂದು ಯಶಸ್ಸು ಎಲ್ಲರಿಗೂ ಬೇಕು. ಭಾರತ ವಿಶ್ವಗುರು ಆಗಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ದೇಶಸೇವೆ ಮಾಡಲು ಮುಂದೆ ಬರುತ್ತಿಲ್ಲ. ಯಾರು ತನ್ನ ಮೇಲೆ ತಾನು ವಿಶ್ವಾಸ ಇಡುತ್ತಾರೋ, ಯಾರಲ್ಲಿ ಆತ್ಮವಿಶ್ವಾಸ ಇದೆಯೋ ಅವರು ಜೀವನದಲ್ಲಿ ಏನಾದರೂ ಸಾಧಿಸುತ್ತಾರೆ. ಆಗ ದೇಶ ಅಭಿವೃದ್ಧಿಯ ಪಥದೆಡೆಗೆ ಸಾಗುತ್ತದೆ. ವಿಶ್ವದಲ್ಲಿ ಭಾರತ ದಿ ಬೆಸ್ಟ್ ಎನಿಸಿಕೊಳ್ಳುತ್ತಿದೆ. ಒಂದಲ್ಲ ಒಂದು ದಿನ ಭಾರತ ವಿಶ್ವದಲ್ಲಿ ನಂ. 1 ಸ್ಥಾನಕ್ಕೇರುತ್ತದೆ. ಇದರಲ್ಲಿ ಎಲ್ಲರ ಸಹಭಾಗಿತ್ವ ಮುಖ್ಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಪಲ್ಲವಿ ಕೇಸರಿ ಮಾತನಾಡಿದರು. ಕ.ಜಾ.ಪ. ತಾಲೂಕಾಧ್ಯಕ್ಷ ಎಸ್.ಬಿ.ಕುಚಬಾಳ ಪ್ರಾಸ್ತಾವಿಕ ಮಾತನಾಡಿದರು. ದೇವಿದಾಸ್ ಮತ್ತು ವೀಣಾ ಚಿಮಕೋಡೆ ತಂಡ ದೇಶಭಕ್ತಿಗೀತೆಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಸಂಚಾಲಕ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಬ್ರಿಮ್ಸ್ ಕಾಲೇಜಿನ ಉಪನ್ಯಾಸಕ ಶಶಿಕಾಂತ ಹೊಸದೊಡ್ಡೆ ನಿರೂಪಿಸಿದರು. ಶಿವಶರಣಪ್ಪ ಗಣೇಶಪುರ ವಂದಿಸಿದರು. ಕೊನೆಯಲ್ಲಿ ರಾಷ್ಟ್ರಭಕ್ತಿಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಬ್ರಿಮ್ಸ್ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!