ಭವಾನಿ ಬಿಜಲಗಾಂವ ಸಪ್ತಾಹದಲ್ಲಿ ಶಾಸಕ ಪ್ರಭು ಚವ್ಹಾಣ ಭಾಗಿ
ನವರಾತ್ರಿ ಉತ್ಸವದ ನಿಮಿತ್ತ ಕಮಲನಗರ ತಾಲ್ಲೂಕಿನ ಭವಾನಿ ಬಿಜಲಗಾಂವ ಗ್ರಾಮದ ಭವಾನಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ 55ನೇ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಗುರುವಾರ ಭಾಗವಹಿಸಿದರು.
ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಸಮೃದ್ಧಿ, ರೈತರ ಕಲ್ಯಾಣ ಹಾಗೂ ಜನತೆಯ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಐತಿಹಾಸಿಕವಾದ ಬಿಜಲಗಾಂವ ಗ್ರಾಮದಲ್ಲಿ ಪ್ರತಿ ವರ್ಷ ಸಪ್ತಾಹ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವುದು ಸಂತೋಷದ ವಿಷಯ. ಮಾನಸಿಕ ನೆಮ್ಮದಿ ಮತ್ತು ಆರೋಗ್ಯಕರ ಜೀವನಕ್ಕಾಗಿ ದಾರ್ಮಿಕ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಗ್ರಾಮಸ್ಥರು ನಡೆಸಿಕೊಂಡು ಬರುತ್ತಿರುವ ಧಾರ್ಮಿಕ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿವೆ ಎಂದರು.
ಭವಾನಿ ಮಾತೆ ಸರ್ವಶಕ್ತ ದೇವಿಯಾಗಿದ್ದು, ಸಾಕಷ್ಟು ಪವಾಡ ಕಾರ್ಯಗಳು ನಡೆದಿವೆ. ತಾಯಿ ಭವಾನಿಯ ಆಶೀರ್ವಾದವಿದ್ದಲ್ಲಿ ಏನಾದರೂ ಪವಾಡ ಸಂಭವಿಸಬಹುದು. ಮಾತೆಯ ಆಶೀರ್ವಾದದಿಂದಾಗಿ ನಾಲ್ಕನೇ ಅವಧಿಗೆ ಶಾಸಕನಾಗಿ ಆಯ್ಕೆಯಾಗಿದ್ದು, ದೇವಿಯ ಇಚ್ಛೆಯಂತೆ ನಿರಂತರ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ಷೇತ್ರದ ಅಭಿವೃದ್ಧಿ ನಿರಂತರ ಶ್ರಮಿಸುತ್ತೇನೆ. ಜನ ಕಲ್ಯಾಣಕ್ಕಾಗಿ ಸದಾ ಸಿದ್ದನಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಔರಾದ ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಮುಖಂಡರಾದ ಸಚಿನ್ ರಾಠೋಡ್, ಗಿರೀಶ ಒಡೆಯರ್, ಅರಹಂತ ಸಾವಳೆ, ಡಾ.ಬಾಲಾಜಿ, ವೆಂಟಕರಾವ ಡೊಂಬಾಳೆ, ತಾನಾಜಿ ಬಾಬ್ರೆ, ಶಿವಾಜಿ ಮಹಾರಾಜ, ಬೀಮರಾವ ಪಾಟೀಲ, ಪ್ರದೀಪ ಡೊಂಬಾಳೆ ಹಾಗೂ ಇತರರು ಉಪಸ್ಥಿತರಿದ್ದರು.