ಬೀದರ ಜಿಲ್ಲೆಯಲ್ಲಿ ಸೋಲಾರ್ ಸಿಟಿ, ಸೋಲಾರ ಪಾರ್ಕ :ಸಚಿವರಾದ ಭಗವಂತ ಖೂಬಾ
ಬೀದರ ಜಿಲ್ಲೆಯಲ್ಲಿ ಸೋಲಾರ್ ಸಿಟಿ, 2500 ಮೆಗಾವ್ಯಾಟ್ ಸಬ್ ಸ್ಟೇಷನ್ ಮತ್ತು 500 ಮೆಗಾವ್ಯಾಟ್ ಸೋಲಾರ ಪಾರ್ಕ ನಿರ್ಮಿಸಲಾಗುವುದು ಎಂದು ಕೇಂದ್ರ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾರವರು ರಾಜ್ಯಸಭೆಯಲ್ಲಿ ಕೆಳಲಾದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.
ರಾಜ್ಯಸಭಾ ಸದಸ್ಯರಾದ ನಾರಾಯಣ ಕೊರೆಗೊಪ್ಪರವರು ಕೇಳಿರುವ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಸಂಪುಟ ದರ್ಜೆ ಸಚಿವರ ಪರವಾಗಿ ಉತ್ತರಿಸಿದ ಕೇಂದ್ರ ಸಚಿವ ಖೂಬಾ, ಈ ಸಂಬಂಧವಾಗಿ ರಾಜ್ಯ ಸರ್ಕಾರಗಳು ಸ್ಥಳ ಗುರುತಿಸಿ, ಕ್ರಿಯಾ ಯೋಜನೆ ಸಿದ್ದಪಡಿಸಲು ಅವಕಾಶ ನೀಡಲಾಗಿದೆ ಜೊತೆಗೆ ಕರ್ನಾಟಕ ರೀನಿವೆಬಲ್ ಎನರ್ಜಿ ಡೇವಲಪಮೆಂಟ್ ಲಿ. ಸಂಸ್ಥೆಯೂ ಸದರಿ ಸೋಲಾರ್ ಸಿಟಿ ಹಾಗೂ 500 ಮೆಗಾವ್ಯಾಟ್ ಸೋಲಾರ್ ಪಾರ್ಕ ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದೆ ಮತ್ತು 2500 ಮೆಗಾವ್ಯಾಟ್ ಸಬ್ ಸ್ಟೇಷನ್ ಸಂಬಂಧವಾಗಿ ರೂರಲ್ ಎಲೆಕ್ಟ್ರೀಫಿಕೇಷನ್ ಕಾರ್ಪೊರೇಶನ ವತಿಯಿಂದ ಈಗಾಗಲೆ ಹರಾಜು ಕರೆಯಲಾಗಿದೆ, ಈ ತಿಂಗಳು ಸದರಿ ಪ್ರಕ್ರಿಯೆ ಪೂರ್ಣಗೊಂಡು ಕಾರ್ಯರಂಭವಾಗಲಿದೆ ಎಂದು ತಿಳಿಸಿದ್ದಾರೆ.
2021ರಲ್ಲಿ ಕಲಬುರಗಿಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ 500 ಮೆಗಾ ವ್ಯಾಟ್ ಸೋಲಾರ್ ಪಾರ್ಕ ಅನ್ನು ಕಾರಣಾಂತರಗಳಿಂದ ಸ್ಥಳ ಬದಲಾವಣೆಗೊಳಿಸಿ, ಬೀದರನಲ್ಲಿ ನಿರ್ಮಾಣ ಮಾಡುವಂತೆ ದಿ. 07-06-2023ರಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ಥಾವನೆ ಸಲ್ಲಿಸಿದೆ. ಈಗಾಗಲೇ ಬೀದರ ಜಿಲ್ಲೆಯ ಔರಾದ ತಾಲೂಕಿನಲ್ಲಿ ಸ್ಥಳ ಗುರುತಿಸುವಿಕೆಗೆ ಸದರಿ ಸಂಸ್ಥೆಯೂ ಚಾಲನೆ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಈ ಹಿಂದೆ ಪತ್ರಿಕಾ ಗೋಷ್ಠಿಗಳಲ್ಲಿ ತಿಳಿಸಿರುವ ಹಾಗೆ ಬೀದರ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಸೋಲಾರ್ ಸಿಟಿ, 2500 ಮೆಗಾವ್ಯಾಟ್ ಸಬ್ ಸ್ಟೇಷನ್ ಮತ್ತು 500 ಮೆಗಾವ್ಯಾಟ್ ಸೋಲಾರ್ ಪಾರ್ಕ ನಿರ್ಮಾಣವಾಗಲಿದೆ, ಇದರಿಂದ ಬೀದರ ಲೋಕಸಭಾ ಕ್ಷೇತ್ರದ ಅಭಿವೃದ್ದಿಗೆ ಮತ್ತಷ್ಟು ವೇಗ ಸಿಗಲಿದೆ, ನಮ್ಮಲ್ಲಿರುವ ಸಾವಿರಾರು ಎಕ್ಕರೆ ಬರಡು ಭೂಮಿಗೆ ಒಳ್ಳೆಯ ಬೆಲೆ ಸಿಗಲಿದೆ, ಮೂಲಭೂತ ಸೌಕರ್ಯಗಳು ಅಭಿವೃದ್ದಿಗೊಳ್ಳಲಿವೆ ಹಾಗೂ ಉದ್ಯೋಗವಕಾಶಗಳು ದೊರೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ.
ಕೇಂದ್ರದೊಂದಿಗೆ ರಾಜ್ಯ ಸರ್ಕಾರ ಸಹಕಾರ ನೀಡಿದರೆ, ಪ್ರಸಕ್ತ ಸಾಲಿನಲ್ಲಿಯೇ ಈ ಮೂರು ಯೋಜನೆಗಳಿಗೆ ಶಂಕುಸ್ಥಾಪನೆಗೊಳಿಸಿ, ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.