ಬೀದರ್

ಬಿಜೆಪಿ ರಾಜ್ಯ ಕಾರ್ಯದರ್ಶಿ, ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ವ್ಯಾಖ್ಯಾನ ವಿಕಸಿತ ಭಾರತ ನಿರ್ಮಾಣಕ್ಕೆ  ಕೇಂದ್ರದ ಬಜೆಟ್ ಬುನಾದಿ

ಬೀದರ್:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ 3.O ಸರ್ಕಾರದ ಚೊಚ್ಚಲ ಬಜೆಟ್ ಜನಪರ, ರೈತಪರ ಮತ್ತು ಸಮಗ್ರ ಅಭಿವೃದ್ಧಿಯ ಪರವಾಗಿದೆ. ಇದು ವಿಕಸಿತ ಭಾರತ ನಿರ್ಮಾಣಕ್ಕೆ ಬುನಾದಿ ಹಾಕುವ ಬಜೆಟ್ ಆಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ವಿಧಾನಸಭೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ವ್ಯಾಖ್ಯಾನಿಸಿದ್ದಾರೆ.
2047 ರಲ್ಲಿ ವಿಕಸಿತ ಭಾರತ ನಿರ್ಮಿಸುವುದಕ್ಕೆ ಬೇಕಾದ ಪೂರಕವಾದ ಅಂಶಗಳನ್ನು ಈ ಬಜೆಟ್ ಹೊಂದಿರುವುದು ವಿಶೇಷವಾಗಿದೆ. “ಸರ್ವೇಜನಾಃ ಸುಖಿನೋ ಭವಂತು” ಎಂಬ ಚಿಂತನೆಯಂತೆ ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ವಿಜನರಿ ಬಜೆಟ್ ಇದಾಗಿದೆ. ಬಡವರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ಯುವಕರು, ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದವರ ಕಾಳಜಿ ಬಜೆಟ್‌ನಲ್ಲಿ ಕಾಣಬಹುದಾಗಿದೆ. ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಐತಿಹಾಸಿಕವೆನಿಸಿದೆ ಎಂದು ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ದೇಶದ ರಕ್ಷಣೆಗಾಗಿ 4.54 ಲಕ್ಷ ಕೋಟಿ ರೂ. ಕಲ್ಪಿಸಿ ಆದ್ಯತೆ ನೀಡಿದರೆ, ಇನ್ನೊಂದೆಡೆ ಮೂಲಸೌಕರ್ಯಕ್ಕೂ ಒತ್ತು ಕೊಡಲಾಗಿದೆ.
ಕೃಷಿ ಹಾಗೂ ಕೃಷಿ ಸಂಬAಧಿತ ವಲಯಕ್ಕೆ 1.52 ಲಕ್ಷ ಕೋಟಿ ರೂ.ನೀಡಿ ರೈತರ ಹಿತ ಕಾಯುವ ಕೆಲಸ ಮಾಡಲಾಗಿದೆ. ಸರ್ಕಾರಿ,  ಖಾಸಗಿ ಸಹಭಾಗಿತ್ವದಲ್ಲಿ ಕೈಗಾರಿಕೆಗಳಲ್ಲಿ 1 ಕೋಟಿ ಯುವಕರಿಗೆ ತರಬೇತಿಯನ್ನು ೫ ಸಾವಿರ ರೂ. ಶಿಷ್ಯವೇತನದೊಂದಿಗೆ ನೀಡಲು ಘೋಷಿಸಿದ್ದು ಹಾಗೂ 30 ಲಕ್ಷ ಉದ್ಯೋಗ ಕಲ್ಪಿಸಲು ನಿರ್ಧರಿಸಿದ್ದು ಯುವಕರಿಗೆ ಜಾಕ್‌ಪಾಟ್ ಎನಿಸಿದೆ. ಉನ್ನತ ಶಿಕ್ಷಣಕ್ಕೆ 10 ಲಕ್ಷದವರೆಗೆ ಸಾಲ ಘೋಷಿಸಿ ಉನ್ನತ ಶಿಕ್ಷಣ ಪಡೆಯಬೇಕೆನ್ನುವ ಬಡ, ಮಧ್ಯಮ ವರ್ಗದ ಅಸಂಖ್ಯಾತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ನನಸಿಗೆ ಮುನ್ನುಡಿ ಬರೆಯಲಾಗಿದೆ. ಮುದ್ರಾ ಸಾಲ ಮಿತಿ 10 ರಿಂದ 20 ಲಕ್ಷಕ್ಕೇರಿಸಿ ಸಣ್ಣ, ಮಧ್ಯಮ ಉದ್ಯಮದಲ್ಲಿ ತೊಡಗುವವರಿಗೆ ಶಕ್ತಿ ತುಂಬಲಾಗಿದೆ ಎಂದು ಬೆಲ್ದಾಳೆ ಹೇಳಿದ್ದಾರೆ.
ಬೆಂಗಳೂರು-ಹೈದಾರಾಬಾದ್ ಕೈಗಾರಿಕಾ ಕಾರಿಡಾರ್ ಯೋಜನೆ ಘೋಷಣೆ ಮಾಡಿರುವುದು ಹೈದರಾಬಾದ್ ಸಮೀಪದ ಬೀದರ್ ಜಿಲ್ಲೆಗೂ ಸಾಕಷ್ಟು ನೆರವಾಗಲಿದೆ. ನಮ್ಮ ಭಾಗದ ಅಭಿವೃದ್ಧಿಗೂ ಇದು ಉತ್ತೇಜನ ನೀಡಲಿದೆ. ಆದಾಯ ತೆರಿಗೆ ನೀತಿಯಲ್ಲಿ ಸಾಕಷ್ಟು ಬದಲಾವಣೆ ತರುವ ಜೊತೆಗೆ ತೆರಿಗೆ ಪದ್ಧತಿ ಮತ್ತಷ್ಟು ಸರಳೀಕರಣಕ್ಕೆ ಆದ್ಯತೆ ನೀಡಲಾಗಿದೆ. ಆದಾಯ ತೆರಿಗೆ ಪಾವತಿದಾರರ ಭಾರ ಮತ್ತೊಂದಿಷ್ಟು ಸ್ವಲ್ಪ ಕಮ್ಮಿ ಮಾಡಲಾಗಿದೆ. ಚಿನ್ನ, ಬೆಳ್ಳಿ ಸುಂಕ ತಗ್ಗಿಸಿ ಹೊಸ ಹೆಜ್ಜೆ ಇಡಲಾಗಿದೆ. ಮೂರು ಕ್ಯಾನ್ಸರ್ ಔಷಧಿಗಳ ತೆರಿಗೆ ರದ್ದುಪಡಿಸಿ ರೋಗಿಗಳ ಹಿತ ಕಾಪಾಡಲಾಗಿದೆ. 3 ಕೋಟಿ ಪ್ರಧಾನಮಂತ್ರಿ ಆವಾಸ್ ಯೋಜನೆ ಮನೆಗಳ ನಿರ್ಮಾಣದ ಘೋಷಣೆ ಸೂರಿಲ್ಲದವರಿಗೆ ಖುಷಿ ನೀಡಿದೆ ಎಂದು ವಿವರಿಸಿದ್ದಾರೆ.
ಮಹಿಳಾ ವಿಕಾಸಕ್ಕೆ 3 ಲಕ್ಷ ಕೋಟಿ ರೂ. ಮೀಸಲಿಟ್ಟು ನಾರಿಶಕ್ತಿಗೆ ಮತ್ತಷ್ಟು ಉತ್ತೇಜನ ನೀಡಲಾಗಿದೆ. 1 ಕೋಟಿ ಮನೆಗಳಿಗೆ 300 ಯೂನಿಟ್ ಉಚಿತ ಸೋಲಾರ್ ವಿದ್ಯುತ್, ಡಾಲರ್ ಬದಲಿಗೆ ರೂಪಾಯಿ ವ್ಯವಹಾರಕ್ಕೆ ಕ್ರಮ, ರಾಜ್ಯಗಳಿಗೆ 50  ವರ್ಷದವರೆಗಾಗಿ ಬಡ್ಡಿರಹಿತ ಸಾಲ ಸೌಲಭ್ಯ, ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಬಂಪರ್ ಆಫರ್ ನೀಡಿ ಉದ್ಯಮ ಸ್ಥಾಪನೆಗೆ ಯತ್ನ ಹೀಗೆ ಎಲ್ಲ ಬಜೆಟ್ ಅಂಶಗಳು ಭಾರತಕ್ಕೆ ಹೊಸ ಶಕ್ತಿ ತುಂಬಿ  2047 ರಲ್ಲಿ ವಿಕಸಿತ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆಯಲಿದೆ ಎಂದು ಬೆಲ್ದಾಳೆ ವಿಶ್ಲೇಷಿಸಿದ್ದಾರೆ.
Ghantepatrike kannada daily news Paper

Leave a Reply

error: Content is protected !!