ಬರಿದಾಬಾದ್: ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಭೇಟಿ, ಗ್ರಾಮ ಸಂಚಾರ
ಬೀದರ್ (ಆ.05): ಇತ್ತೀಚೆಗೆ ಕಲುಷಿತ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥತರಾಗಿದ್ದ ಬೆನ್ನಲ್ಲೇ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬರಿದಾಬಾದ್ ಗ್ರಾಮಕ್ಕೆ ಶನಿವಾರ ಸಂಜೆ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಭೇಟಿ ನೀಡಿ, ಗ್ರಾಮ ಸಂಚಾರ ನಡೆಸಿದರು.
ಗ್ರಾಮ ಸಂಚಾರ ನಡೆಸಿದ ಅವರು, ಕಲುಷಿತ ನೀರು ಕುಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರ ಮಾಹಿತಿಯನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಣಮಂತ ಹಾಗೂ ಗ್ರಾಮಸ್ಥರಿಂದ ಪಡೆದು, ಗ್ರಾಮದಲ್ಲಿರುವ ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಮೂಲಗಳನ್ನು ಪರಿಶೀಲಿಸಿದರು.
ಕುಡಿಯುವ ನೀರಿನ ವಿಷಯದಲ್ಲಿ ಅಧಿಕಾರಿಗಳು, ಗ್ರಾಮಸ್ಥರು ಜಾಗೃತಿ ವಹಿಸುವುದು ಅಗತ್ಯವಾಗಿದೆ. ಇತ್ತೀಚೆಗೆ ಜಿಲ್ಲೆಯ ವಿವಿಧೆಡೆ ಈ ರೀತಿಯ ಪ್ರಕರಣಗಳು ಸಂಭವಿಸುತ್ತಿದ್ದು, ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರುವುದು ಸೂಕ್ತವಾಗಿದೆ. ಆದಷ್ಟು ಕುಡಿಯುವ ನೀರು ಶುದ್ಧವಾಗಿಟ್ಟುಕೊಳ್ಳುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ. ಈ ರೀತಿಯ ಘಟನೆಗಳಿಗೆ ಆಸ್ಪದ ಕೊಡಬಾರದು ಎಂದು ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ಪಿಡಿಒ ಹಣಮಂತ, ಮುಖಂಡರಾದ ಗಾಳ್ಯಪ್ಪ, ಸಂಜುಕುಮಾರ್, ತುಕ್ಕರಾಮ್, ಅಶೋಕ್, ಶ್ರೀಕಾಂತ್ ಮಾಸ್ಟರ್, ನಾಗೇಶ್ ಚಟನಳ್ಳಿ, ಮಾರುತಿ, ರಾಜಕುಮಾರ, ಮಾಣಿಕ್ ಸೇರಿದಂತೆ ಅನೇಕರಿದ್ದರು.