ಬಗದಲ ಗ್ರಾಮದಲ್ಲಿ ಅಭಯ ಹಸ್ತ ಬಸವಣ್ಣನವರ ಮೂರ್ತಿ ಅನಾವರಣ
ಗುರು ಬಸವಣ್ಣನವರು ವೈಚಾರಿಕ ವೈಜ್ಞಾನಿಕ ಧರ್ಮ ಕೊಟ್ಡಿದ್ದಾರೆ. ಬಸವಣ್ಣನವರ ಸದಾಶಯದಂತೆ ನಡೆದರೆ ನಾವು ಸಮೃದ್ಧ ಜೀವನ ಜೊತೆಗೆ ಕಲ್ಯಾಣ ರಾಜ್ಯ ಕಟ್ಟಬಹುದು ಎಂದು ಡಾ.ಬಸವಲಿಂಗ ಪಟ್ಟದ್ದೆವರು ನುಡಿದರು. ಬಗದಲ ಗ್ರಾಮದಲ್ಲಿ ಇಂದು ಅಭಯ ಹಸ್ತದ ಗುರು ಬಸವಣ್ಣನವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಬೇಕು. ಇಂದು ಸಿಖ್, ಜೈನ್, ಬೌಧ್ದ ಇಸ್ಲಾಂ ಧರ್ಮಗಳಿದ್ದಂತೆ ಎಲ್ಲ ಅರ್ಹತೆ ಗಳಿವೆ. ಕೇಂದ್ರ ಸರಕಾರ ಇವುಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಿದಂತೆ ನಮಗೂ ನೀಡಿದರೆ ಭಾವಿ ಭವಿಷತ್ತಿನ ಬಡ ಲಿಂಗಾಯತ ಮಕ್ಕಳಿಗೆ ಅನುಕೂಲ ವಾಗುತ್ತದೆ.
ದೇಶದಲ್ಲಿ ನಾವು ಅಲ್ಪಸಂಖ್ಯಾತರಿದ್ದೇವೆಂಬುದು ಅನೇಕ ಹೋರಾಟ ಮಾಡಲಾಗಿದೆ ಎಂದರು. ಲಿಂಗಾಯತ ಇದು ಜಾತಿ ರಹಿತ, ವರ್ಗರಹಿತ, ಸಮಾನತೆ ತಳಹದಿ ಮೇಲೆ ನಿರ್ಮಾಣಗೊಂಡಿದೆ. ಎಲ್ಲ ಬಸವ ಅನುಯಾಯಿಗಳು ಧರ್ಮನಿಷ್ಠೆ, ಶ್ರದ್ಧೆ, ನೀತಿವಂತರಾಗಿ ಜೀವನ ನಡೆಸಲು ಮಾರ್ಗದರ್ಶನ ಮಾಡಿದರು. ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಡಾ.ಶೈಲೆಂದ್ರ ಕೆ ಬೆಲ್ದಾಳೆ ಅವರು ಬಸವಣ್ಣನವರ ಮೂರ್ತಿ ಅನಾವರಣಗೊಳಿಸಿ, ಅಧ್ಯಕ್ಷತೆ ವಹಿಸಿ – ಇಂದು ಬಸವಣ್ಣನವರ ಮೂರ್ತಿ ಅನಾವರಣ ಕಾರ್ಯಕ್ರಮ ಎಲ್ಲ ಸಮುದಾಯದವರು ಸೇರಿ ಮಾಡಿರುವುದು ಸಂತಸ. ಬಸವಣ್ಣನವರ ಕಲ್ಪನೆ ಇದಾಗಿತ್ತು, ಇವನಾರವ ಇವನಾರವ ಎಂದೆನಿಸದೆ ಇವನಮ್ಮವ ಇವನಮ್ಮವ ಎಂದೇಳಿ ಇವ ನಮ್ಮ ಮನೆಯ ಮಗನೆಂದೆನಿಸಯ್ಯ ಎಂದ ಫಲವಾಗಿ ಎಲ್ಲರೂ ಕಲ್ಯಾಣಕ್ಕೆ ಬಂದು ನೆಲೆಗೊಂಡಿರುವುದು ಕಾಣುತ್ತೇವೆ.
ಬಾರದು ಬಪ್ಪದು, ಬಪ್ಪದು ತಪ್ಪದು ಎಂಬುದು ತುಂಬಾ ಅರ್ಥಗರ್ಭಿತವಾಗಿದೆ. ನಾವು ಅನ್ಯ ಚಿಂತನೆ ಮಾಡದೆ ಸದಾಶಯದ ಸಂಪನ್ನರಾಗಿ ಅನ್ಯರಿಗೆ ತೊಡಕಾಗದಂತೆ ನಡೆಯಲು ಪ್ರಯತ್ನಿಸಬೇಕು. ಹಳ್ಳಿಗಳಲ್ಲಿ ಕೇವಲ ಚಿಕ್ಕ ಚಿಕ್ಕ ಮಾತುಗಳಿಗೆ ಹಾಗೂ ಸಣ್ಣ ಪುಟ್ಟ ಆಸ್ತಿಗಳಿಗೆ ಜಗಳವಾಡಿ ಮನಸ್ತಾಪ ಮಾಡಿಕೊಳ್ಳದೆ ಎಲ್ಲ ಸಮುದಾಯದ ನಾಲ್ಕು ಜನ ಹಿರಿಯರು ಸೇರಿ ಸಮಿತಿ ರಚಿಸಿಕೊಂಡು ವ್ಯಾಜ್ಯಗಳು ಇಲ್ಲೆ ಇತ್ಯರ್ಥಗೊಂಡರೆ ಅಂಥಗ್ರಾಮ ಪಾವನವಾಗುತ್ತದೆ. ಆ ದಿಕ್ಕಿನಲ್ಲಿ ನನ್ನಿಂದ ಏನಾದರೂ ಸಹಕಾರವಿದ್ದರೆ ಖಂಡಿತವಾಗಿ ತನು ಮನ ಧನ ದಿಂದ ಸಹಕಾರ ಕೊಡುಲು ಸಿದ್ದನಿದ್ದೇನೆಂದು ಹೇಳಿದರು.
ಸ್ವಾತಂತ್ರ್ಯ ಬಂದು ಎಪ್ಪತ್ತಾರು ವರ್ಷಗಳು ಕಳೆದ ಮೇಲೆ ಬಗದಲ ಗ್ರಾಮದಲ್ಲಿ ಜಾಗೃತಿ ಅಳವಟ್ಟು ಇಂದು ಬಸವಣ್ಣನವರ ಮೂರ್ತಿ ಗ್ರಾಮದಲ್ಲಿ ಕಂಗೊಳಿಸುತ್ತಿರುವುದು ಅಭಿಮಾನದ ಸಂಗತಿ. ಇಂದು ಮೂರ್ತಿ ಅನಾವರಣ ಗೊಂಡಿದೆ ತಾವೆಲ್ಲರೂ ದಿನಾಲು ಬಸವಸ್ಮರಣೆ ಮಾಡುತ್ತ ಜೀವನ ಸಮೃದ್ಧಿ ಮಾಡಿಕೊಳ್ಳಲು ಕರೆ ನೀಡಿದರು.
ಜಾಗತಿಕ ಲಿಂಗಾಯತ ಧರ್ಮದ ಅಧ್ಯಕ್ಷರಾದ ಬಸವರಾಜ ಧನ್ನೂರು ಮುಖ್ಯ ಅತಿಥಿಗಳಾಗಿ ಬಸವಣ್ಣನವರ ತತ್ವ್ತ ಸಿದ್ದಾಂತ ಅಂದಿಗಿಂತ ಇಂದು ಅವಶ್ಯಕತೆ. ನಾವೂ ಪ್ರಧಾನ ಮಂತ್ರಿಯವರ ಬಸವ ಸ್ಮರಣೆ ಅಭಿನಂದಿಸುತ್ತೇವೆ ಜೊತೆಗೆ ಅವರು ವಿಶ್ವಗುರು ಬಸಣ್ಣನವರ ಜಯಂತಿ ಯನ್ನು ರಾಷ್ಟ್ರ ದ್ಯಂತ ಆಚರಿಸಲು ಆದೇಶ ಹೊರಡಿಸಲು ಈಗಾಗಲೇ ಮನವಿ ಮಾಡಲಾಗಿದೆ ಎಂದರು. ಬಸವಕಲ್ಯಾಣ ಪರುಷ ಕಟ್ಟೆ ನವೀಕರಣ ನಡೆದಿದೆ. ಇದು ಅತ್ಯಂತ ಪವಿತ್ರವಾದ ತಾಣ. ಬಸವಣ್ಣನವರು ದಿನಾಲು ಅಹವಾಲು ಸ್ವೀಕರಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯುವ ಸ್ಥಳದಲ್ಲಿ ಜಿಲ್ಲಾಡಳಿತ ಆ ಸ್ಥಳದಲ್ಲಿ ಬಸವ ಮೂರ್ತಿ ಪ್ರತಿಷ್ಠಾನ ಮಾಡಲಿ ಎಂದು ಮನವಿ ಮಾಡಿದರು. ಈಗಾಗಲೇ ಕೇಂದ್ರ ಸರಕಾರ ಲಿಂಗಾಯತ ಸ್ವತಂತ್ರ ಧರ್ಮದ ವಿಷಯದಲ್ಲಿ ಕಡತ ಹಿಂದಕ್ಕೆ ಕಳುಹಿಸಿದ್ದು ಅದನ್ನು ಪುನಃ ಮರು ಪರಿಶೀಲನೆ ಮಾಡಿ ಮಾನ್ಯ ಮುಖ್ಯ ಮಂತ್ರಗಳು ಕೇಂದ್ರ ಕ್ಕೆ ಕಳುಹಿಸಲು ಅವರಿಗೆ ಮನವರಿಕೆ ಮಾಡಬೇಕಾಗಿದೆ ಎಂದರು.
ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷರಾದ ಬಾಬು ವಾಲಿ ಮಾತನಾಡಿ ನಾವು ಸಂಘಟಿತರಾಗೋಣ. ಪ್ರತಿ ಊರಲ್ಲಿ ಈ ರೀತಿ ಬಸವ ಅನುಯಾಯಿಗಳು ಸೇರಿ ಬಸವ ಮೂರ್ತಿ ನಿರ್ಮಿಸಿ, ನಾವೂ ಕೈಲಾದ ಮಟ್ಟಿಗೆ ಸಹಕಾರ ಮಾಡುವೆವು.ಇದರಿಂದ ಯುವ ಪೀಳಿಗೆ ಜಾಗೃತಿ ಯಾಗಿ ಸಮಾಜ ಸಮೃದ್ದಿಗೊಳ್ಳುತ್ತದೆಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಮಾತನಾಡಿ ಇಂದು ಕನ್ನಡ ಬಸವ ಇಂದು ನಾಣ್ಯದ ಎರಡು ಮುಖ. ಅಂದಿನ ಕಾಲಘಟ್ಟದಲ್ಲಿ ಎಲ್ಲರೂ ಅಚ್ಚಕನ್ನಡದಲ್ಲಿ ವಚನಗಳು ಬರೆದು ಅದನ್ನು ದೇವ ಭಾಷೆಯಾಗಿಸಿದ್ದಾರೆ. ತಾವು ಅದನ್ನು ಮನಗಾಣಿ ಮಕ್ಕಳಿಗೆ ಆದಿಶೆಯಲ್ಲಿ ಮಾರ್ಗದರ್ಶನ ಮಾಡಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದರು.
ಬಸವ ಸೇವಾ ಪ್ರತಿಷ್ಠಾನ ಅಕ್ಕ ಡಾ ಗಂಗಾಂಬಿಕೆ ಪಾಟೀಲ ಅವರು ನೇತೃತ್ವ ವಹಿಸಿ ಬಸವಣ್ಣನವರು ನಮ್ಮ ಹೆಣ್ಣು ಮಕ್ಕಳಿಗೆ ವಿಶೇಷವಾದ ಪೂಜೆ ಹಾಗೂ ಧಾರ್ಮಿಕ, ಸಾಮಾಜಿಕ ಸ್ವಾತಂತ್ರ್ಯ ಕೊಟ್ಟಿದ್ದಾರೆ, ತಾವೆಲ್ಲರೂ ಕನಿಷ್ಠ ದಿನಾಲು ಐದು ವಚನಗಳು ಓದಬೇಕು. ಬಗದಲ ಗ್ರಾಮದಿಂದ ಆಚೆ ಹೋಗುವಾಗ ಒಂದ್ಸಲ ಬಸವ ಮೂರ್ತಿ ಕಡೆಗೆ ನೋಡಿ ಹೋಗಿ ಅಲ್ಲಿ ಕಳಬೇಡ ಕೊಲಬೇಡ ವಚನ ಬರೆಯಲಾಗಿದೆ. ಅದನ್ನು ಅವಲೋಕಿಸಿ ನಡೆದರೆ ವ್ಯಕ್ತಿ ತಪ್ಪು ಮಾಡೋದಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ವೇದಿಕೆ ಮೇಲೆ ಬಸವ ಕೇಂದ್ರ ಅಧ್ಯಕ್ಷರಾದ ಶರಣಪ್ಪ ಮಿಠಾರೆ, ರಮೇಶ ಮಠಪತಿ, ಬಸವರಾಜ ಐನುಲಿ, ಬಸವಣ್ಣಪ್ಪ ಐಸಪೂರೆ ಉಪಸ್ಥಿತರಾಗಿದ್ದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಧರ್ಮಬಾಯಿ ಮಿಟ್ಟುಸಿಂಗ್ ಸಿ. ರಾಠೋಡ, ಮಲ್ಲಿಕಾರ್ಜುನ ಸ್ವಾಮಿಗಳು ಬೆಳಗಾವಿ, ಮಾತೆ ಮೈತ್ರಾದೇವಿ ಮನ್ನಾಎಖೇಳ್ಳಿ, ಬಸವಗೀತ ಬೆಳಗಾವಿ ಹಾಜರಿದ್ದರು. ಬಾಜಾ ಬಜಂತ್ರಿ ಮಕ್ಕಳ ಲೇಜಿಮದೊಂದಿಗೆ ಮೆರವಣಿಗೆ ಮಾಡಲಾಯಿತು.ಮೊದಲಿಗೆ ಶಿವಕುಮಾರ ಪಾಂಚಾಳ ವಚನ ಪ್ರಾರ್ಥನೆ ಮಾಡಿದರೆ, ರಾಜಕುಮಾರ ಪಾಟೀಲ ಸ್ವಾಗತಿಸಿ, ಜಿ ಬಂಡೆಪ್ಪ ವಂದಿಸಿದರೆ ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರು. ದಾಸೋಹ ಗೈದ ರಾಜಶೇಖರ ಪಾಟೀಲ ಹಾಗೂ ಸಂಜೀವಕುಮಾರ ಬಿರಾದಾರ ಸನ್ಮಾನಿಸಿದರು.