ಫ್ಲೋರಾ ಪಬ್ಲಿಕ್ ಹಿರಿಯ ಪ್ರಾಥಮಿಕ ಶಾಲೆ ಭೂಮಿ ಪೂಜೆ ಗುಣಮಟ್ಟದ ಶಿಕ್ಷಣ ಮಕ್ಕಳ ಬಾಳಿನ ನಂದಾದೀಪ – ಡಾ. ಶೈಲೇಂದ್ರ ಬೆಲ್ದಾಳೆ
ಬೀದರ: ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳ ಬಾಳಿಗೆ ನಂದಾದೀಪವಿದ್ದಂತೆ. ಫ್ಲೋರಾ ಪಬ್ಲಿಕ್ ಹಿರಿಯ ಪ್ರಾಥಮಿಕ ಶಾಲೆಯು ಈ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ.ಬೆಲ್ದಾಳೆ ತಿಳಿಸಿದರು.
ಚಂದ್ರಭಾಗ ತೀರಿ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಫ್ಲೋರಾ ಪಬ್ಲಿಕ್ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಭೂಮಿ ಪೂಜೆಯನ್ನು ತಾಲೂಕಿನ ಚಿಟ್ಟಾವಾಡಿಯಲ್ಲಿ ನೆರವೇರಿಸಿ ಮಾತನಾಡಿದರು. ಶಾಲೆಯ ಮುಖ್ಯಗುರು ಸುವರ್ಣ ಬಿರಾದಾರ ಹಾಗೂ ಕಾರ್ಯದರ್ಶಿ ದತ್ತಾತ್ರೇಯ ಬಿರಾದಾರ ಅವರು 2003 ರಿಂದ ನಿರಂತರವಾಗಿ ಇಪ್ಪತ್ತೊಂದು ವರ್ಷಗಳ ಕಾಲ ಸಂಘರ್ಷ ಜೀವನ ನಡೆಸುತ್ತ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿದ್ದಾರೆ. ಪ್ರತೀ ವರ್ಷ ಹತ್ತಾರು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇದೀಗ ಚಿಟ್ಟಾವಾಡಿ ಸಮೀಪದ ಗೋರನಳ್ಳಿ ಬಿ. ಜಮೀನಿನಲ್ಲಿ ಶಾಲೆ ನಿರ್ಮಿಸುತ್ತಿರುವುದು ಖುಷಿಯಾಗಿದೆ. ಶಾಸಕರ ಅನುದಾನದಲ್ಲಿ ಐದು ಲಕ್ಷ ಪರಿಹಾರ ನೀಡಲಾಗುವುದು. ಮತ್ತು ಈ ಭಾಗದ ರಸ್ತೆ, ಚರಂಡಿ ಹಾಗೂ ಉದ್ಯಾನವನಗಳ ಅಭಿವೃದ್ಧಿಗೆ ಒತ್ತು ಕೊಡಲಾಗುವುದು ಎಂದರು.
ಶಾಲೆಯ ಮುಖ್ಯಗುರು ಸುವರ್ಣಾ ಡಿ. ಬಿರಾದಾರ ಮಾತನಾಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಎರಡು ದಶಕಗಳಿಂದ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಸರ್ಕಾರ ಹಾಗೂ ಆಡಳಿತ ಮಂಡಳಿಯ ಸಹಕಾರದೊಂದಿಗೆ ಶಾಲೆ ಕಟ್ಟಡ ಅಭಿವೃದ್ಧಿ ಆಗುತ್ತಿದೆ. ಇದು ಕೇವಲ ಭೌತಿಕ ಕಟ್ಟಡವಲ್ಲ. ಮಕ್ಕಳ ಬಾಳಿನ ದೇವಾಲಯವಿದ್ದಂತೆ. ಪಾಲಕರು ಫ್ಲೋರಾ ಶಾಲೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಫ್ಲೋರಾ ಪಬ್ಲಿಕ್ ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯದರ್ಶಿ ದತ್ತಾತ್ರೇಯ ಬಿರಾದಾರ ಮಾತನಾಡಿದರು. ವೇದಿಕೆ ಮೇಲೆ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀಕಾಂತ ಚಿಮಕೋಡೆ, ಅಮಲಾಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಖೈರುನಾ ಬೇಗಂ, ಪಿಕೆಪಿಎಸ್ ಅಧ್ಯಕ್ಷ ತಾತ್ಯಾರಾವ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂಸ್ಥೆ ಸದಸ್ಯ ಗೋಪಾಲರಾವ ಪಾಟೀಲ, ಗ್ರಾ.ಪಂ.ಸದಸ್ಯ ಸಂಜೀವಕುಮಾರ ಪಾಟೀಲ, ಆದಿತ್ಯ ಬಿರಾದಾರ, ನಂದಕುಮಾರ ಮದರ್ಗಿ, ವೀರಶೆಟ್ಟಿ ದೇಶಮುಖ, ರಮೇಶ ಬಿರಾದಾರ, ಮಹೇಶ ಪಾಂಚಾಳ, ದಿಲೀಪ್ ವರ್ಮಾ, ರಮೇಶ ತುಕದೆ, ಅಭಿಯಂತರ ಮಹಾದೇವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.