ಬೀದರ್

ಪ್ರವಚನ ಕಾರ್ಯಕ್ರಮದಲ್ಲಿ ಡಾ. ಬಸವಲಿಂಗ ಅವಧೂತರ ಕಿವಿಮಾತು ಮೊಬೈಲ್‍ನಿಂದ ಮಕ್ಕಳನ್ನು ದೂರವಿರಿಸಿ

ಬೀದರ್: ಪಾಲಕರು ಮೊಬೈಲ್‍ನಿಂದ ಮಕ್ಕಳನ್ನು ದೂರವಿರಿಸಬೇಕು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು.
ಬೀದರ್ ತಾಲ್ಲೂಕಿನ ಚಿಮಕೋಡ್ ಗ್ರಾಮದಲ್ಲಿ ನಾಗೇಶ್ವರ ಖಾಂಡ ಪ್ರಯುಕ್ತ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಅತಿಯಾದ ಮೊಬೈಲ್ ಬಳಕೆಯು ಮಕ್ಕಳ ದೈಹಿಕ, ಮಾನಸಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಮೊಬೈಲ್ ಗೀಳು ಅಂಟಿಸಿಕೊಂಡವರು ಮಾನಸಿಕ ಖಿನ್ನತೆಗೂ ಒಳಗಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸಾಧ್ಯವಾದಷ್ಟು ಮಕ್ಕಳ ಕೈಗೆ ಮೊಬೈಲ್ ಕೊಡಬಾರದು. ಅವರಲ್ಲಿ ಪುಸ್ತಕ ಓದುವ ಆಸಕ್ತಿ ಬೆಳೆಸಬೇಕು. ಸದ್ಗುಣಗಳನ್ನು ಕಲಿಸಬೇಕು ಎಂದು ತಿಳಿಸಿದರು.
ಮಾನವ ಜನ್ಮ ಇರುವುದು ಒಂದೇ. ಜಾತಿ, ಮತ, ಪಂಥವೆನ್ನದೆ ಪರಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ದದಿಂದ ಬದುಕು ಸಾಗಿಸಬೇಕು. ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಯಾರಿಗೂ ಕೇಡು ಉಂಟು ಮಾಡಬಾರದು ಎಂದು ಕಿವಿಮಾತು ಹೇಳಿದರು.
ಆಲಸ್ಯದಿಂದ ರಕ್ತದೊತ್ತಡ, ಮಧುಮೇಹದಂಥ ರೋಗಗಳು ಬರುತ್ತವೆ. ಶ್ರಮ ಸಂಸ್ಕøತಿ ರೂಢಿಸಿಕೊಂಡವರ ಬಳಿ ಯಾವ ರೋಗಗಳೂ ಸುಳಿಯುವುದಿಲ್ಲ. ಕಾರಣ, ನಿತ್ಯ ಸತ್ಯಶುದ್ಧ ಕಾಯಕ ಮಾಡಬೇಕು. ಅದರಿಂದ ಬರುವ ಆದಾಯದಲ್ಲಿ ಒಂದಿಷ್ಟು ದಾಸೋಹಕ್ಕೂ ಬಳಸಬೇಕು ಎಂದು ತಿಳಿಸಿದರು.
ನಿತ್ಯ ನಸುಕಿನ ಜಾವ ಎದ್ದು ಜಪ, ತಪ, ಧ್ಯಾನ ಮಾಡಿದರೆ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ. ಶರಣರು, ಸಂತರ ಜೀವನ ಚರಿತ್ರೆ, ವಚನ ಸಾಹಿತ್ಯದ ಅಧ್ಯಯನದಿಂದ ಸಾರ್ಥಕ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಮುಖರಾದ ದೇವಸ್ಥಾನದ ಪೂಜಾರಿ ಶಿವಕುಮಾರ ಸ್ವಾಮಿ, ನಾಗೇಶ ಜಾಪಟ್ಟೆ, ಕಿರಣ ಕಡೆದೊಡ್ಡೆ, ಪರಮೇಶ ಢೆಂಪೆ, ರಮೇಶ ಬಿರಾದಾರ, ಆನಂದ ಗಡ್ಡೆ, ನಾಗೇಶ ಪಾಟೀಲ, ಪವನ ಶೆಟ್ಟೆಪ್ಪನೂರ್, ಮಲ್ಲಿಕಾರ್ಜುನ ಚಿನ್ನಪ್ಪನೋರಾ, ವಿನೋದ ಕಡಗಂಚಿ ಚಿಂಚೋಳಿ ಮೊದಲಾದವರು ಇದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

Ghantepatrike kannada daily news Paper

Leave a Reply

error: Content is protected !!