ಪತ್ರಕರ್ತರು ವಸ್ತುನಿಷ್ಠ ಸುದ್ದಿಗಳನ್ನು ಪ್ರಸಾರ ಮಾಡಬೇಕು -ಸಚಿವ ಈಶ್ವರ ಬಿ. ಖಂಡ್ರೆ
ಬೀದರ, ಜುಲೈ.29 :- ಪತ್ರಿಕಾ ರಂಗವು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾಗಿದ್ದು ಪತ್ರಕರ್ತರು ವಸ್ತುನಿಷ್ಠ, ನಿಖರವಾದ ಸುದ್ದಿಗಳನ್ನು ಪ್ರಸಾರ ಮಾಡಬೇಕು ಅಂದಾಗ ಸಮಾಜದಲ್ಲಿ ಬದಲಾವಣೆಯಾಗುತ್ತದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಅವರು ಸೋಮವಾರ ಬೀದರ ಜಿಲ್ಲಾ ಪತ್ರಿಕಾ ಭವನದಲ್ಲಿ ಬೀದರ ಜಿಲ್ಲಾ ಪತ್ರಿಕಾ ದಿನಾಚರಣೆ ಸಮಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿನ ಲೋಪ- ದೋಷಗಳನ್ನು ಎತ್ತಿ ಹಿಡಿಯುವದು ಪತ್ರಿಕಾ ರಂಗದ ಧರ್ಮವಾಗಿದೆ ಮತ್ತು ಅವರ ಮೇಲೆ ದೊಡ್ಡ ಜವಾಬ್ದಾರಿಯು ಇದೆ. ಹಿಂದಿನ ದಿನಗಳಲ್ಲಿ ಯಾವುದೇ ಸಾಮಾಜಿಕ ಮಾಧ್ಯಮಗಳು ಇಲ್ಲದ ಸಮಯದಲ್ಲಿ ಜನರಿಗೆ ಮಾಹಿತಿ ತಲುಪಿಸುವ ಕೆಲಸ ಪತ್ರಿಕೆಗಳು ಮಾಡಿವೆ. ಯಾವುದೇ ಒಂದು ಸಮಸ್ಯೆ ಸುದ್ದಿಮಾಧ್ಯಮಗಳಲ್ಲಿ ಬಂದಾಗ ಮಾತ್ರ ಅದಕ್ಕೆ ಹೆಚ್ಚಿನ ಮಹತ್ವ ಸಿಗುತ್ತದೆ.
ರಾಷ್ಟ್ರೀಯತೆಯ ಸಂದರ್ಭದಲ್ಲಿ ಗಾಂಧೀಜಿಯವರು, ಬಾಲಗಂಗಾಧರ ತಿಲಕ ಮತ್ತು ಅಂಬೇಡ್ಕರAತಹ ಹಲವಾರು ನಾಯಕರು ಪತ್ರಿಕೆಗಳ ಮುಖಾಂತರ ಜನರಿಗೆ ಮಾಹಿತಿ ತಲುಪಿಸುವ ಮೂಲಕ ಜನರಿಗೆ ಜಾಗೃತಿ ಮಾಡುತ್ತಿದ್ದರು. ಬೆಂಗಾಲ ಗೆಜೆಟ್ ಎಂಬ ಪತ್ರಿಕೆ ಭಾರತದ ಅತ್ಯಂತ ಹಳೆಯ ಪತ್ರಿಕೆಯಾಗಿದೆ. ಕರ್ನಾಟಕದಲ್ಲಿ ಮಂಗಳೂರು ಸಮಾಚಾರ ಮೊದಲ ಪತ್ರಿಕೆಯಾಗಿದೆ ಎಂದು ಹೇಳಿದರು.
ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂಖಾನ್ ಅವರು ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿ, ನಮ್ಮ ಸರ್ಕಾರ ಪತ್ರಕರ್ತರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುತ್ತದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜಾಧ್ಯಕ್ಷರಾದ ಶಿವಾನಂದ ತಗಡೂರು ಅವರು ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬೀದರ ಪತ್ರಿಕಾ ಭವನಕ್ಕೆ ನನ್ನ ಕಡೆಯಿಂದ ಸಹಾಯ ಸಹಕಾರ ನೀಡಲಾಗುವುದು ತಮಗೆಲ್ಲರಿಗೂ ಪತ್ರಿಕಾ ದಿನಾಚರಣೆ ಶುಭಾಶಯಗಳು ಎಂದು ಹೇಳಿದರು.
ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಬೀದರಗೆ ಬಂದರೆ ಮಿನಿ ಭಾರತಕ್ಕೆ ಬಂದ ಅನುಭವವಾಗುತ್ತದೆ ಇಲ್ಲಿ ಹಿಂದೂ, ಮುಸ್ಲಿಂ, ಕೈಸ್ತ, ಸಿಖ್ಖ ಸೇರಿದಂತೆ ಎಲ್ಲಾ ಭಾಷೆಯ ಜನರಿದ್ದಾರೆ. ಇದು ಬೀದರಗೆ ನಾನು ಬರುತ್ತಿರುವುದು ಎರಡನೆಯ ಭೇಟಿಯಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಪಾಸಗಳನ್ನು ನೀಡುವ ಕುರಿತು ನಿಯಮಗಳನ್ನು ರೂಪಿಸುತ್ತಿದ್ದು ಇನ್ನು ಒಂದು ತಿಂಗಳಲ್ಲಿ ಪತ್ರಕರ್ತರ ಕೈ ಸೇರಲಿವೆ. ಆರೋಗ್ಯ ಯೋಜನೆ ಮತ್ತು ಪತ್ರಕರ್ತರಿಗೆ ನೀಡುವ ಪಿಂಚಣಿ 12 ಸಾವಿರ ರೂ ನಿಂದ 15 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾವನೆ ಇದೆ. ಪತ್ರಕರ್ತರು ಸಮಾಜ ಹಾಗೂ ಸರ್ಕಾರದ ಕೊಂಡಿಯಾಗಿ ಕೆಲಸ ಮಾಡಬೇಕೆಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಪತ್ರಕರ್ತರು ವಿಶ್ವಾಸಾರ್ಹತೆಯಿಂದ ಕೆಲಸ ಮಾಡುವ ಮೂಲಕ ಪತ್ರಿಕಾ ರಂಗದ ಆಳ ಮತ್ತು ಅಗಲವನ್ನು ತಿಳಿದುಕೊಳ್ಳಬೇಕು. ಗ್ರಾಮೀಣ ಭಾಗದ ಪತ್ರಕರ್ತರ ಬಸ್ ಪಾಸ ಚುನಾವಣೆ ಬಂದ ಕಾರಣ ತಡವಾಗಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿAದ ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸುಳ್ಳು ಸುದ್ದಿ ಹಾಗೂ ಬ್ಯ್ಲಾಕ್‌ಮೇಲ ಮಾಡುವ ಪತ್ರಕರ್ತರನ್ನು ದೂರ ಮಾಡುವ ಕೆಲಸ ನಾವೇ ಮಾಡಬೇಕಿದೆ ಸಮಾಜದ ಒಳಿತಿಗಾಗಿ ನಾವೆಲ್ಲರೂ ಕೆಲಸ ಮಾಡೋಣ ಎಂದು ಹೇಳಿದರು.
ಬೀದರ ಜಿಲ್ಲೆಯ ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ ಅವರು ಮಾತನಾಡಿ, ಪತ್ರಕರ್ತರಿಗೆ ಬದ್ದತೆ ಇರಬೇಕು ಮತ್ತು ಪತ್ರಿಕೆಗಳಲ್ಲಿ ಸಣ್ಣದು ದೊಡ್ಡದು ಎಂದು ತಾರತಮ್ಯ ಮಾಡಬಾರದು ಎಲ್ಲವು ಒಂದೇ ಎನ್ನುವಂತಾಗಬೇಕು. ನನ್ನ ಪತ್ರಿಕಾ ರಂಗದಲ್ಲಿ ಬಹಳಷ್ಟು ಅನುಭವಗಳಾಗಿವೆ ಎಲ್ಲರಿಗೂ ಪತ್ರಿಕಾ ದಿನಾಚರಣೆ ಶುಭಾಶಯಗಳು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬೀದರ ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಬೀದರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗಿರೀಶ್ ಬದೋಲೆ, ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಬೀದರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುರೇಶ ಜಿ, ಬೀದರ ಜಿಲ್ಲಾ ಪತ್ರಿಕಾ ದಿನಾಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದ ದೇವಪ್ಪ, ಬೀದರ ಜಿಲ್ಲಾ ಪತ್ರಿಕಾ ದಿನಾಚರಣೆ ಸಮಿತಿ ಸಂಚಾಲಕ ಮಲ್ಲಿಕಾರ್ಜುನ ಬಿರಾದರ, ಬೀದರ ಜಿಲ್ಲಾ ಪತ್ರಿಕಾ ದಿನಾಚರಣೆ ಸಮಿತಿ ಖಜಾಂಚಿ ಮಾಳಪ್ಪಾ ಅಡಸಾರೆ, ಬೀದರ ಜಿಲ್ಲಾ ಪತ್ರಿಕಾ ದಿನಾಚರಣೆ ಸಮಿತಿ ಉಪಾಧ್ಯಕ್ಷ ವಿರೂಪಾಕ್ಷ ಗಾದಗಿ, ಬೀದರ ಜಿಲ್ಲಾ ಪತ್ರಿಕಾ ದಿನಾಚರಣೆ ಸಮಿತಿ ಉಪಾಧ್ಯಕ್ಷ ರಾಜಕುಮಾರ ಸ್ವಾಮಿ, ಬೀದರ ಜಿಲ್ಲಾ ಪತ್ರಿಕಾ ದಿನಾಚರಣೆ ಸಮಿತಿ ಉಪಾಧ್ಯಕ್ಷ ಶಾಯದುಲ್ ಹಸನ್ ಖಾದ್ರಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪತ್ರಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.