ಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ
ಬೀದರ್: ಗ್ರಾಮ ಪಂಚಾಯಿತಿ ನೂತನ ಹಾಗೂ ಮಾಜಿ ಅಧ್ಯಕ್ಷ-ಉಪಾಧ್ಯಕ್ಷರ ಸನ್ಮಾನ, ವರ್ಗಾವಣೆಗೊಂಡ ಪಿಡಿಒಗೆ ಬೀಳ್ಕೊಡುಗೆ ಹಾಗೂ ಹೊಸ ಪಿಡಿಒ ಸ್ವಾಗತ ಕಾರ್ಯಕ್ರಮ ಬೀದರ್ ತಾಲ್ಲೂಕಿನ ನಾಗೋರಾ ಗ್ರಾಮದ ಪಂಚಾಯಿತಿ ಕಚೇರಿಯಲ್ಲಿ ನಡೆಯಿತು.
ಪಂಚಾಯಿತಿ ನೂತನ ಅಧ್ಯಕ್ಷೆ ಫೂಲಮ್ಮ ಸುಮಂತ, ಉಪಾಧ್ಯಕ್ಷ ನರಸಪ್ಪ ಬಿ. ಜಾನಕನೋರ, ಮಾಜಿ ಅಧ್ಯಕ್ಷೆ ಪ್ರಭಾವತಿ ಅಣ್ಣಾರಾವ್, ಮಾಜಿ ಉಪಾಧ್ಯಕ್ಷ ಶಿವಕುಮಾರ ನಾಗೋರಾ, ವರ್ಗಾವಣೆಯಾದ ಪಿಡಿಒ ಗಾಯತ್ರಿದೇವಿ ಎಸ್. ಹೊಸಮನಿ ಹಾಗೂ ನೂತನ ಪಿಡಿಒ ವಿಜಯಕುಮಾರ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ನನ್ನ ಅವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಆಗಿರುವುದು ಸಂತಸ ಉಂಟು ಮಾಡಿದೆ. ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಅಮೃತ ಯೋಜನೆಗೆ ಆಯ್ಕೆಯಾಗಿದೆ. ನಾಗೋರಾದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ, ಘೋಡಂಪಳ್ಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಪದವಿಪೂರ್ವ ಕಾಲೇಜಿನಲ್ಲಿ ಉದ್ಯಾನ ನಿರ್ಮಾಣ, ಡಿಜಿಟಲ್ ಗ್ರಂಥಾಲಯ, ಸೋಲಾರ್ ಬೀದಿ ದೀಪ, ಸಿಸಿಟಿವಿ ಕ್ಯಾಮರಾ ಅಳವಡಿಕೆ, ಗ್ರಾಮಗಳ ಸಾರ್ವಜನಿಕ ಸ್ಥಳಗಳಲ್ಲಿ ಆಸನ ಅಳವಡಿಕೆ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಪಂಚಾಯಿತಿಯಲ್ಲಿ ಐದು ವರ್ಷ ಸೇವೆ ಸಲ್ಲಿಸಿ, ಅಷ್ಟೂರು ಪಂಚಾಯಿತಿಗೆ ವರ್ಗಾವಣೆಗೊಂಡ ಗಾಯತ್ರಿದೇವಿ ಹೊಸಮನಿ ಹೇಳಿದರು.
ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರು ನೀಡಿದ ಸಹಕಾರ ಮರೆಯಲಾಗದು ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮದ ಪ್ರಮುಖರು ಇದ್ದರು.