ನೀರು ಉಳಿಸಿದರೆ ಅದು ನಮ್ಮನ್ನು ಉಳಿಸುತ್ತದೆ – ಅರುಣಕುಮಾರ ಮೊಕಾಶಿ
ಬೀದರ: ನೀರು ಉಳಿಸಿದರೆ ಅದು ನಮ್ಮನ್ನು ಮುಂದಿನ ದಿನಗಳಲ್ಲಿ ಉಳಿಸುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಮಳೆ ನೀರನ್ನು ಹಿಡಿದಿಡುವ ಹೊಂಡಗಳನ್ನು ನಿರ್ಮಾಣ ಮಾಡಿಕೊಳ್ಳಬೇಕು. ಸ್ನಾನ ಮಾಡುವಾಗ, ಮುಖ ತೊಳೆದುಕೊಳ್ಳುವಾಗ, ವಾಹನಗಳನ್ನು ತೊಳೆಯುವಾಗ ನೀರನ್ನು ಮಿತವಾಗಿ ಬಳಸಬೇಕು. ಇದರಿಂದ ಭವಿಷ್ಯತ್ತಿನಲ್ಲಿ ನೀರಿನ ಬರಗಾಲ ತಪ್ಪುತ್ತದೆ ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಅರುಣಕುಮಾರ ಮೊಕಾಶಿ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ, ರೈಜಿಂಗ್ ಹ್ಯಾಂಡ್ಸ್ ಯೂಥ್ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ, ವೀರಭದ್ರೇಶ್ವರ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಕ್ಯಾಚ್ ದಿ ರೇನ್ ಫೇಸ್-3 ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ ತಿಳಿಸಿದರು.
ಮುಂದೆ ಒಂದು ವೇಳೆ ಮಹಾಯುದ್ಧ ಜರುಗಿದರೆ ಅದು ಕೇವಲ ನೀರಿಗಾಗಿ ಎಂಬ ಮಾತು ಅರ್ಥಮಾಡಿಕೊಳ್ಳಬೇಕು. ಇಂದಿನ ಕಾಲದಲ್ಲಿ ನಾವು ನೀರನ್ನು ಮುಚ್ಚಿದ ಬಾಟಲಿಗಳಲ್ಲಿ ಖರೀದಿ ಮಾಡಿ ಕುಡಿಯುತ್ತಿದ್ದೇವೆ. ಇದು ಉತ್ತಮ ಬೆಳವಣಿಗೆಯಲ್ಲ. ನೀರು ಕಲುಷಿತಗೊಳ್ಳದಂತೆ ನೋಡಿಕೊಂಡು ಮಳೆ ನೀರನ್ನು ಹಿಡಿದಿಟ್ಟು ಅದನ್ನು ಬಾವಿಯೊಳಗೆ ಬಿಡುವ ಪ್ರಯತ್ನ ಮಾಡಬೇಕು. ಮಳೆ ನೀರು ಮನೆ ಉಪಯೋಗಕ್ಕೆ ಮತ್ತು ಹೊಲಕ್ಕೆ ಬಹಳ ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಮನೋಜಕುಮಾರ ಮಾತನಾಡಿ ಮುಂದಿನ ದಿನಗಳಲ್ಲಿ ನೀರಿನ ಭೀಕರ ಬರಗಾಲ ಬರುವ ಸಂಭವವಿದೆ. ಮಳೆ ನೀರನ್ನು ಸಂಗ್ರಹಿಸಿ ಹಿಡಿದಿಡುವ ಪ್ರಯತ್ನ ಸರ್ವರೂ ಮಾಡಬೇಕು. ಪರಿಸರವನ್ನು ತುಳಿದು ಬದುಕುವುದಕ್ಕಿಂತ ಅದನ್ನು ಬೆಳೆಸಿ ನಾವು ಕೂಡಾ ಬೆಳೆಯಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರೈಜಿಂಗ್ ಹ್ಯಾಂಡ್ಸ್ ಯೂಥ್ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸತೀಶ ಬೆಳಕೋಟೆ ಬೆಂಗಳೂರಿನಲ್ಲಿ ಈಗಾಗಲೇ ನೀರಿನ ಬರಗಾಲ ಬಂದಿದೆ. ಹೀಗಾಗಿ ಕೈತೊಳೆದ ನೀರು ಸಂಸ್ಕರಿಸಿ ಮತ್ತೆ ಅದೇ ನೀರು ಪುನರ್ಬಳಕೆ ಆಗುವಂತೆ ಮಾಡುತ್ತಿದ್ದಾರೆ. ಆದ್ದರಿಂದ ಮಳೆ ನೀರನ್ನು ಸಂಗ್ರಹಿಸುವ ಪರಿಪಾಠ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಈ ಜಾಗೃತಿಯನ್ನು ಕಾಲೇಜುಗಳಲ್ಲಿ ಮಕ್ಕಳಿಗೆ ನೀಡಲೆಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಾಪು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಕಾಶಿನಾಥ ಪಾಟೀಲ ಮಾತನಾಡಿದರು.
ಸತೀಶ ಬೆಳಕೋಟೆ ಸ್ವಾಗತಿಸಿದರು. ಡಾ. ಮನೋಹರ ಮೇತ್ರೆ ನಿರೂಪಿಸಿದರು. ಡಾ. ವಿದ್ಯಾ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.