ಬೀದರ್

ನೀಟ್: ಎಂಟು ವಿದ್ಯಾರ್ಥಿಗಳಿಗೆ 700ಕ್ಕೂ ಅಧಿಕ ಅಂಕ ಶಾಹೀನ್‍ಗೆ 550 ವೈದ್ಯಕೀಯ ಸೀಟು ನಿರೀಕ್ಷೆ

ಬೀದರ್: ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ (ನೀಟ್) ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದಿರುವ ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು, ಸರ್ಕಾರಿ ಕೋಟಾದಡಿ 550ಕ್ಕೂ ಅಧಿಕ ಸೀಟುಗಳನ್ನು ಪಡೆಯುವ ನಿರೀಕ್ಷೆಯಲ್ಲಿದೆ.
ಕಾಲೇಜಿನ ಎಂಟು ವಿದ್ಯಾರ್ಥಿಗಳು 720 ಅಂಕಗಳ ಪೈಕಿ 700ಕ್ಕೂ ಅಧಿಕ ಅಂಕ ಗಳಿಸಿ ಅಮೋಘ ಸಾಧನೆ ತೋರಿದ್ದಾರೆ.
ಮಹಮ್ಮದ್ ಇಬ್ರಾಹಿಂ ಅಲ್ತಾಫ್, ಖಾನ್ ಸಫ್ವಾನ್ ಮಹ್ಮಮದ್ ಆಸಿಫ್ ಹಾಗೂ ಶಿಫಾ ಶಮೀಮ್ ತಲಾ 705 ಅಂಕ, ರುಮೈಸಾ ಅಲಿ ಖಾನ್ 701, ಮನಿಯಾರ್ ಮಹಮ್ಮದ್ ಬಾಶರ್, ರೋಹಿತ್, ಖಾನ್ ಅಬಿಬುಲ್ಲಾ ಮನ್ಸೂರ್ ಹಾಗೂ ರಿಶಿಕೇಶ್ ಕಾಮತಿಕರ್ 700 ಅಂಕ ಗಳಿಸಿದ್ದಾರೆ.
ಕಾಲೇಜಿನ ಮೂವರು ವಿದ್ಯಾರ್ಥಿಗಳು 705 ಅಂಕ, ಎಂಟು ವಿದ್ಯಾರ್ಥಿಗಳು 700 ಮೇಲ್ಪಟ್ಟು, 38 ವಿದ್ಯಾರ್ಥಿಗಳು 680 ಕ್ಕೂ ಅಧಿಕ, 161 ವಿದ್ಯಾರ್ಥಿಗಳು 650ಕ್ಕೂ ಹೆಚ್ಚು, 431 ವಿದ್ಯಾರ್ಥಿಗಳು 600 ಮೇಲ್ಪಟ್ಟು ಹಾಗೂ 666 ವಿದ್ಯಾರ್ಥಿಗಳು 575ಕ್ಕೂ ಅಧಿಕ ಅಂಕ ಗಳಿಸಿದ್ದಾರೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.
ಕಾಲೇಜಿಗೆ ಈ ವರ್ಷ ನಿರೀಕ್ಷೆಯಂತೆ ಅತ್ಯುತ್ತಮ ಫಲಿತಾಂಶ ಬಂದಿದೆ. 2023 ಹಾಗೂ 2024 ರಲ್ಲಿ ಕಾಲೇಜಿನ ತಲಾ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆದಿದ್ದರೆ, ಈ ಬಾರಿ 550ಕ್ಕೂ ಅಧಿಕ ವಿದ್ಯಾರ್ಥಿಗಳು ಸೀಟು ಗಿಟ್ಟಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ ಕಾಲೇಜಿನ ನಾಲ್ಕು ಸಾವಿರ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆದಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳು ವೈದ್ಯರಾಗಿ ಸೇವೆ ಸಹ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಶಾಹೀನ್ ಟ್ಯೂಷನ್, ಮೊಬೈಲ್, ಆಟೊಮೊಬೈಲ್‍ನಿಂದ ಮುಕ್ತವಾಗಿದೆ. ಮಕ್ಕಳು ಕಲಿಕೆಯಲ್ಲಿ ಏಕಾಗ್ರತೆ ಕಾಯ್ದುಕೊಳ್ಳಲು ಪೂರಕವಾದ ವಾತಾವರಣ ಹೊಂದಿದೆ. ಆಡಳಿತ ಮಂಡಳಿ, ಉಪನ್ಯಾಸಕರ ಮಾರ್ಗದರ್ಶನ, ಪಾಲಕರ ಸಹಕಾರ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದಾಗಿ ನೀಟ್‍ನಲ್ಲಿ ಪ್ರತಿ ವರ್ಷ ಅತ್ಯುತ್ತಮ ಫಲಿತಾಂಶ ದೊರಕುತ್ತಿದೆ ಎಂದು ಹೇಳಿದ್ದಾರೆ.
ಮೊದಲು ವೈದ್ಯಕೀಯ ಕೋರ್ಸ್ ಕನಸು ನನಸಾಗಿಸಿಕೊಳ್ಳಲು ಜಿಲ್ಲೆಯ ವಿದ್ಯಾರ್ಥಿಗಳು ಅಧ್ಯಯನಕ್ಕೆ ಧಾರವಾಡ, ಬೆಂಗಳೂರು, ಮಂಗಳೂರು ಮೊದಲಾದ ಕಡೆ ಹೋಗುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಇಡೀ ದೇಶದ ವಿದ್ಯಾರ್ಥಿಗಳೇ ಬೀದರ್‍ನತ್ತ ಮುಖ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಾದ ಶೈಕ್ಷಣಿಕ ಕ್ರಾಂತಿಯಿಂದಾಗಿ ಇದು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
650 ವರ್ಷಗಳ ಹಿಂದೆ ಬೀದರ್‍ನಲ್ಲಿ ಮಹಮೂದ್ ಗಾವಾನ್ ವಿಶ್ವವಿದ್ಯಾಲಯ ಇತ್ತು. ಅದರಲ್ಲಿ 25 ದೇಶಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಆ ಗತವೈಭವ ಈಗ ಮತ್ತೆ ಮರುಕಳಿಸುತ್ತಿದೆ ಎಂದು ಹೇಳಿದ್ದಾರೆ.
ಶಾಹೀನ್‍ನಲ್ಲಿ ದೇಶದ ಬಹುತೇಕ ಎಲ್ಲ ರಾಜ್ಯಗಳು ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಸಾವಿರಾರು ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.
ಶಾಹೀನ್ ಅನೇಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದೆ. ಕಾಲೇಜಿನಲ್ಲಿ ಉಚಿತ ಶಿಕ್ಷಣ ಪಡೆದು ಸಾಧನೆಗೈದ ವಿದ್ಯಾರ್ಥಿಗಳು ಈಗ ಅನೇಕ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಇದು, ಒಳ್ಳೆಯ ಬೆಳವಣಿಗೆ. ಪರಸ್ಪರ ಸಹಕಾರದಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

Ghantepatrike kannada daily news Paper

Leave a Reply

error: Content is protected !!