ನಾವೇ ನಿಜವಾದ ಭೋವಿಗಳು – ಶೈಲೇಂದ್ರ ಹಿವರೆ
ಬೀದರ: ನಾವೇ ನಿಜವಾದ ಭೋವಿ ಸಮಾಜದವರು. ನಾವು ಶತಮಾನಗಳಿಂದಲೂ ಪಲ್ಲಕ್ಕಿ ಹೊರುವ ಕಾಯಕದವರಾಗಿದ್ದೇವೆ. ಆದ್ದರಿಂದ ಸರ್ಕಾರ ನಮಗೆ ಮಾತ್ರ ನಿಜವಾದ ಭೋವಿ ಸಮಾಜದವರೆಂದು ಪರಿಗಣಿಸಿ ಸರ್ಕಾರಿ ಸೌಲಭ್ಯ ಒದಗಿಸಬೇಕೆಂದು ನಗರದಲ್ಲಿ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನಗರದ ಭೋವಿ ಗಲ್ಲಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತೆರಳಿದ ಸಮಾಜದ ಬಾಂಧವರು ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಪ್ರತಿಭಟನೆಯನ್ನು ಅಖಿಲ ಕರ್ನಾಟಕ ಭೋವಿ ಸಮಾಜ ವಿವಿಧೋದ್ದೇಶ ಕಲ್ಯಾಣ ಸಂಘ, ಕಲಬುರಗಿ ಹಾಗೂ ಬೀದರ ವತಿಯಿಂದ ಆಯೋಜನೆ ಮಾಡಲಾಗಿತ್ತು. ಈ ಕುರಿತು ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶೈಲೇಂದ್ರ ಹಿವರೆ ಭೋವಿ ಸಮಾಜಕ್ಕೆ ಸಿಗುವ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಅಲೆದಾಡಿ ಅಲೆದಾಡಿ ಸೌಲಭ್ಯ ಪಡೆಯುವ ಸ್ಥಿತಿ ಬಂದಿದೆ. ನಾವು ಸಣ್ಣ ಜನಾಂಗದವರು. ನಮ್ಮ ಮೇಲೆ ಅನ್ಯಾಯ ಮಾಡಲಾಗುತ್ತಿದೆ. ವಡ್ಡರಿಗೂ ಮತ್ತು ಭೋವಿಗಳಿಗೆ ಸಂಬಂಧವಿಲ್ಲ ಎಂದರು.
ವಡ್ಡರ ಜನಾಂಗದವರೇ ಬೇರೆ. ಭೋವಿ ಜನಾಂಗದವರೇ ಬೇರೆ. ಸಂವಿಧಾನದಲ್ಲಿ ಒಂದೇ ಜಾತಿಗೆ ಎರಡೆರಡು ಹೆಸರುಗಳಿಲ್ಲ. ಹೀಗಾಗಿ ವಡ್ಡರಿಗೆ ಬೇಕಾದ ಸೌಲಭ್ಯ ಅವರಿಗೆ ಸರ್ಕಾರ ಕೊಡಲಿ. ನಾವು ಬೇಡ ಎನ್ನುವುದಿಲ್ಲ. ಆದರೆ ಭೋವಿ ವಡ್ಡರ ಎಂದು ಹೇಳಿಕೊಂಡು ನಮ್ಮ ಸಮಾಜದ ಮೇಲೆ ಸವಾರಿ ಮಾಡಲು ಹೊರಟಿರುವುದು ತಪ್ಪು. ನಮ್ಮ ಸೌಲಭ್ಯಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ. ನಮ್ಮ ಅಭಿವೃದ್ಧಿ ನಿಗಮದಿಂದ ಸಿಗಬೇಕಾದ ಅನುದಾನ ಕೂಡಾ ಸರಿಯಾಗಿ ಸಿಗುತ್ತಿಲ್ಲ. ನಾವೇ ನಿಜವಾದ ಭೋವಿ ಜನಾಂಗದವರಾಗಿದ್ದರೂ ಕೂಡಾ ಹತ್ತಾರು ಪ್ರಶ್ನೆಗಳನ್ನು ಅಧಿಕಾರಿಗಳು ನಮಗೆ ಮಾಡುತ್ತಿದ್ದಾರೆ. ನಮ್ಮ ಭೋವಿ ಜನಾಂಗದ ಯುವಕರಿಗೆ ನೌಕರಿ ಸಿಕ್ಕರೂ ಸಿಂಧುತ್ವ ಪ್ರಮಾಣ ಪತ್ರ ಸಿಗುತ್ತಿಲ್ಲ. ನೌಕರಿಯಾದರೂ ಅಮಾನತು ಮಾಡಲಾಗುತ್ತಿದೆ. ನಂತರ ಕೋರ್ಟ್‍ಗೆ ಹೋಗಿ, ನ್ಯಾಯ ಸಿಕ್ಕ ನಂತರ ನೌಕರಿಗೆ ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರ ನಾವೇ ಭೋವಿ ಜನಾಂಗದವರು ಎನ್ನುವ ಆದೇಶ ಪತ್ರ ನೀಡಿರುವ ದಾಖಲೆಗಳು ಕೂಡಾ ನಮ್ಮಲ್ಲಿವೆ. ಆದ್ದರಿಂದ ಸರ್ಕಾರ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಕೋರಿದರು.
ಇದೇ ವೇಳೆ ಸಂಘದ ರಾಜ್ಯಧ್ಯಕ್ಷ ಲಕ್ಷ್ಮಣ ಭೋವಿ, ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಶಿವರಾಮ ಭೋವಿ, ರಾಜ್ಯ ಕಾರ್ಯದರ್ಶಿ ಸುಭಾಷಚಂದ್ರ, ಗೌರವಾಧ್ಯಕ್ಷ ತುಳಸಿದಾಸ ಭೊಸಲೆ, ಉಪಾಧ್ಯಕ್ಷ ಭಗವಾನ್ ಅನಂತವಾಲ್, ಗಣೇಶ ಭೋಸ್ಲೆ, ಕಾರ್ಯದರ್ಶಿ ಸಂದೀಪ ಹಿವರೆ, ನರೇಂದ್ರ ಹಿವರೆ, ಖಜಾಂಚಿ ಸುನೀಲ ಹಿವರೆ, ಪ್ರಮುಖರಾದ ಆನಂದ ಕೋಮಟಕರ್, ಉಮೇಶ ಕೋಮಟಕರ್, ಸುನೀಲ, ಪ್ರವೀಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.