ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ನಿಂದ ಮನವಿ ಪತ್ರ ಸೀಲಿಂಗ್ ದೀಪ ಅಳವಡಿಕೆಗೆ ಆಗ್ರಹ
ಬೀದರ್: ನಗರದ ಗಾಂಧಿಗಂಜ್ ಮಾರುಕಟ್ಟೆಯಲ್ಲಿ ಸೀಲಿಂಗ್ ದೀಪಗಳನ್ನು ಅಳವಡಿಸಬೇಕು ಎಂದು ಗಾಂಧಿಗಂಜ್ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಆಗ್ರಹಿಸಿದೆ.
ಅಸೋಸಿಯೇಷನ್ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಕಾರ್ಯದರ್ಶಿ ಸಂತೋಷ್ ಮುದ್ದಾ ಅವರನ್ನು ನಿಯೋಗದಲ್ಲಿ ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಮಾರುಕಟ್ಟೆಯ ಮುಖ್ಯ ಪ್ರಾಂಗಣದಲ್ಲಿ ಇರುವ ರಸ್ತೆಗಳ ಮೇಲೆ ಮೇಲ್ಛಾವಣಿ ಅಳವಡಿಸಿದ್ದು, ಸಂಜೆಯಾಗುತ್ತಿದ್ದಂತೆಯೇ ಕತ್ತಲೆ ಆವರಿಸಿ, ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಗಮನ ಸೆಳೆದರು.
ಮುಂಗಾರು ಬೆಳೆಗಳ ಸುಗ್ಗಿ ಪ್ರಾರಂಭವಾಗುವ ಮುನ್ನ ಮೇಲ್ಛಾವಣಿಯಲ್ಲಿ ಬೃಹತ್ ಗಾತ್ರದ ಸೀಲಿಂಗ್ ದೀಪಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯ ಪ್ರಾಂಗಣದಲ್ಲಿ ರಾತ್ರಿ ವೇಳೆ ರೈತರ ಹಾಗೂ ವ್ಯಾಪಾರಸ್ಥರ ದಾಸ್ತಾನುಗಳ ಕಳವು ಹೆಚ್ಚಾಗಿರುವ ಕಾರಣ ಎಲ್ಲೆಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಪ್ರಾಂಗಣದ ಹೊರ ಹೋಗುವ ರಸ್ತೆಗಳಿಗೆ ಗೇಟ್ ಅಳವಡಿಸಬೇಕು. ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು. ಅಸೋಸಿಯೇಷನ್ಗೆ ನಿವೇಶನ ಒದಗಿಸಬೇಕು ಎಂದು ಬೇಡಿಕೆ ಮಂಡಿಸಿದರು.
ಅಸೋಸಿಯೇಷನ್ ಕಾರ್ಯದರ್ಶಿ ಭಗವಂತ ಔದತಪುರ, ಪ್ರಮುಖರಾದ ರಾಜಪ್ಪ ಗುನ್ನಳ್ಳಿ, ನಾಗಶೆಟ್ಟೆಪ್ಪ ಕಾರಾಮುಂಗಿ, ಬಾಲಾಜಿ, ಬಂಡೆಪ್ಪ, ಸೋಮನಾಥ ಗಂಗಶೆಟ್ಟಿ, ನರಸಿಂಗ್ ಸಿಂಧೆ, ಗೋವಿಂದರಾವ್ ನೀಲಮನಳ್ಳಿ, ಕಂಟೆಪ್ಪ ಕನ್ನಳ್ಳಿ, ಬಸವರಾಜ ಲದ್ದಿ, ಕಾಶೀನಾಥ ರತ್ನಾಪುರ, ಸಿದ್ದಪ್ಪ ಗುನ್ನಳ್ಳಿ ಮತ್ತಿತರರು ಇದ್ದರು.