ದಾಸೋಹ ಸೇವೆಯಿಂದ ದೇವಕೃಪೆ ಲಭಿಸುತ್ತದೆ: ಈಶ್ವರಸಿಂಗ್ ಠಾಕೂರ್
ಬೀದರ: ಪ್ರತಿಯೊಬ್ಬರೂ ಕಾಯಕ ಮಾಡುವುದರ ಜೊತೆಗೆ ದಾಸೋಹ ಸೇವೆ ಮಾಡಬೇಕು. ದಾಸೋಹದಿಂದ ದೇವರ ಕೃಪೆ ಲಭಿಸುವುದರ ಜೊತೆಗೆ ಹಸಿದವರ ಹೊಟ್ಟೆಗೆ ಅಮೃತ ಉಣಿಸಿದಂತಾಗುತ್ತದೆ ಎಂದು ಭಾರತೀಯ ಜನತಾ ಪಕ್ಷದ ವಿಭಾಗೀಯ ಸಹಪ್ರಭಾರಿ ಹಾಗೂ ಬೀದರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ್ ತಿಳಿಸಿದರು.
ನಗರದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ದಾಸೋಹ ಭವನ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ವೇ. ರಾಜಮಲ್ಲಯ್ಯ ಬೋರಂಚಿ ಸ್ವಾಮಿಗಳು ಓಂ ನಮಃ ಶಿವಾಯ ಮಂತ್ರ ಜಪಿಸುತ್ತ ಸುಮಾರು ಐವತ್ತು ವರ್ಷಗಳಿಂದ ಅನುಷ್ಠಾನ, ಪೂಜೆ, ದಸರಾ, ಅಕ್ಷಯ ತೃತೀಯ ದಿವಸ ಅನ್ನದಾಸೋಹ ಮಾಡಿಸುತ್ತಾರೆ. ನಿರಂತರ ದಾಸೋಹ ನಡೆಯಲಿ ಎಂಬ ಸದುದ್ದೇಶದಿಂದ ದಾಸೋಹ ಭವನ ಕಟ್ಟಡ ನಿರ್ಮಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಅರ್ಚಕ ಸಿದ್ಧಲಿಂಗೇಶ ಸ್ವಾಮಿ ಪೂಜೆ ನಡೆಸಿಕೊಟ್ಟರು. ಇದೇ ವೇಳೆ ವೈಷ್ಣೋದೇವಿ ಶಕ್ತಿಪೀಠದ ಅಮೃತಪ್ಪ ಪೂಜಾರಿ, ಮಾನಶೆಟ್ಟಿ ಬೆಳಕೇರಿ, ಸಂಗಮೇಶ ಸ್ವಾಮಿ, ಶಿವಲಿಂಗಪ್ಪ ಜಲಾದೆ, ಧನಾಜಿ ಉಪ್ಪಾರ, ಡಾ. ಸಂತೋಷಕುಮಾರ, ದೀಪಕ ಹಳೆಂಬುರ, ವೀರಶೆಟ್ಟಿ ಹಳ್ಳಿ, ಬಸವರಾಜ ಪಾಟೀಲ, ಮಹೇಶ ಕುಲಕರ್ಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.