ತೆಲಂಗಾಣಾದಲ್ಲಿ ಶಾಸಕ ಪ್ರಭು ಚವ್ಹಾಣ ಪ್ರಚಾರ
ತೆಲಂಗಾಣಾ ರಾಜ್ಯದ ನೆಲಗೊಂಡ ಜಿಲ್ಲೆಯಲ್ಲಿರುವ ದೇವರಕೊಂಡ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ನೇಮಕವಾಗಿರುವ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಮಂಗಳವಾರ ದೇವರಕೊಂಡದಲ್ಲಿ ಪ್ರಚಾರ ನಡೆಸಿದರು.
ಮುಂಬರುವ ದಿನಗಳಲ್ಲಿ ತೆಲಂಗಾಣಾ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಸಿದ್ಧತೆಯ ನಿಮಿತ್ತ ಪಕ್ಷದ ಕಾರ್ಯಕ್ರಮ ಎಂ.ಎಲ್.ಎ ಪ್ರವಾಸ ಯೋಜನೆಯಡಿ ದಿಂಡಿ, ಸಿಂಗರಾಜಪಲ್ಲಿ, ಕೊಂಡಾಮಲ್ಲೆಪಲ್ಲಿ ಸೇರಿದಂತೆ ಹಲವೆಡೆ ಸಂಚರಿಸಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಸರಣಿ ಸಭೆಗಳನ್ನು ನಡೆಸಿದರು.
ಕಳೆದೊಂದು ವಾರದಿಂದ ದೇವರಕೊಂಡ ಕ್ಷೇತ್ರದ ಪ್ರವಾಸದಲ್ಲಿರುವ ಶಾಸಕರು, ವಿವಿಧ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ, ಗೋಡೆ ಬರಹ ಬರೆಯುವುದು, ಬಿತ್ತಿಪತ್ರಗಳನ್ನು ಅಂಟಿಸಿ ಗಮನ ಸೆಳೆದರು. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ದೇಶದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಕುರಿತ ಸಾಧನೆಗಳ ಕರಪತ್ರಗಳನ್ನು ವಿತರಿಸಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿದರು. ಮುಂದಿನ ದಿನಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಭಿವೃದ್ಧಿ ಪರವಾದ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಕೋರಿದರು.
ಮಂಡಲ, ಮಹಾಶಕ್ತಿ ಕೇಂದ್ರ ಹಾಗೂ ಶಕ್ತಿ ಕೇಂದ್ರದ ಪದಾಧಿಕಾರಿಗಳ ಸಭೆ ನಡೆಸಿ ವಿಧಾನಸಭಾ ಚುನಾವಣೆಯಲ್ಲಿ ಮಾಡಬೇಕಾದ ಕೆಲಸಗಳು, ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನತೆಯ ಎದುರು ಕೊಂಡೊಯ್ಯುವುದು ಮತ್ತು ಪಕ್ಷವನ್ನು ಗೆಲ್ಲಿಸಲು ರೂಪಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸಲಹೆ-ಸೂಚನೆಗಳನ್ನು ನೀಡಿದರು.
ಕ್ಷೇತ್ರದ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಗಳಂತೆ ರಾಜ್ಯವನ್ನು ಅಭಿವೃದ್ಧಿಪಡಿಸಲು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು. ಈ ಮೂಲಕ ದೇವರಕೊಂಡ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಬದಲಾವಣೆಗೆ ಮುನ್ನುಡಿ ಬರೆಯಬೇಕಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಚುರುಕಿನಿಂದ ಕೆಲಸ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಎಂಎಲ್ಎ ಪ್ರವಾಸ ಯೋಜನೆಯ ಸಂಚಾಲಕ ಎ.ಟಿ ಕೃಷ್ಣ ಪ್ರಮುಖರಾದ ಲಾಲು ನಾಯಕ್, ಕಲ್ಯಾಣ ನಾಯಕ್, ರಾಮಶೆಟ್ಟಿ ಪನ್ನಾಳೆ , ಕೀರಣ ಪಾಟೀಲ ಸೇರಿದಂತೆ ಇತರರಿದ್ದರು.